Advertisement
ತನ್ನ 13ನೇ ವಯಸ್ಸಿನಲ್ಲಿ ಸುರ್ಜಿತ್ ಸಾಮಾಜಿಕ ಚಟುವಟಿಕೆ ಆರಂಭಿಸಿದ್ದ. ನಿರಂತರ ಹೋರಾಟ ನಡೆಸಿ ಆತ ತನ್ನ ಗ್ರಾಮದ ಸುಮಾರು 5 ಮದ್ಯದಂಗಡಿಗಳು° ಮುಚ್ಚಿಸಿದ. ಮಾತ್ರವಲ್ಲ ನೂರಕ್ಕಿಂತಲೂ ಅಧಿಕ ಮಕ್ಕಳನ್ನು ಶಾಲೆಗೆ ಸೇರಿಸಿ ದೊಡ್ಡ ಬದಲಾವಣೆಗೆ ಕಾರಣಕರ್ತನಾದ. ಹೀಗೆ ಅಸಾಧಾರಣ ಚಟುವಟಿಕೆಗಳಿಂದ ವಿಶ್ವದ ಗಮನ ಸೆಳೆದ.
ಸುರ್ಜಿತ್ ತನ್ನ ಜೀವನದಿಂದ ಪಾಠ ಕಲಿತು ಈ ಹೋರಾಟಕ್ಕ ಇಳಿದಿದ್ದ. ಅವನ ತಂದೆ ಮದ್ಯಪಾನಿಯಾಗಿದ್ದರು. ಅವರು ದಿನಾ ಕುಡಿದು ಬಂದು ಅಮ್ಮನಿಗೆ ಕಿರುಕುಳ ನೀಡುತ್ತಿದ್ದರು. ಅವರದ್ದು ಕೂಡು ಕುಟುಂಬವಾಗಿತ್ತು. ಕೃಷಿ ಮತ್ತು ಕೂಲಿ ಕೆಲಸ ಪ್ರಧಾನ ಆದಾಯ ಮಾರ್ಗವಾಗಿತ್ತು. ಈ ಮಧ್ಯೆ ಅವನ ತಂದೆಯ ಕುಡಿತದ ಚಟ ಆ ಕುಟುಂಬವನ್ನು ಇನ್ನೂ ಸಂಕಷ್ಟದ ಸ್ಥಿತಿಗೆ ದೂಡಿತ್ತು. ಇತ್ತ ತಂದೆಯನ್ನು ಕೆಲಸದಿಂದ ತೆಗೆದು ಹಾಕಿದ್ದರು. ಈ ಕಾರಣದಿಂದ ಸುರ್ಜಿತ್‌ಗೆ ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಗಿ ಬಂತು. ಅಮ್ಮನ ಕಣ್ಣೀರು ಜತೆಗೆ ಅಮ್ಮನಂತಹ ಹಲವರ ಕಣ್ಣೀರು ನೋಡಲಾಗದೆ ಅವನು ಹೋರಾಟಕ್ಕೆ ನಿರ್ಧರಿಸಿದ.
Advertisement
ಮಕ್ಕಳ ಸೈನ್ಯಆರಂಭದಲ್ಲಿ ಸುರ್ಜಿತ್‌ನ ಚಟುವಟಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿಧಾನವಾಗಿ ಅವನು ಓರಗೆಯ ಮಕ್ಕಳನ್ನು ತನ್ನೊಂದಿಗೆ ಸೇರಿಸಿಕೊಂಡ. ಹೀಗೆ ಸುಮಾರು 90ರಷ್ಟು ಮಕ್ಕಳು ಅವನ ಹೋರಾಟಕ್ಕೆ ಕೈ ಜೋಡಿಸಿದರು. ಆರೋಗ್ಯ, ಕುಟುಂಬ, ಜೀವನ ಶೈಲಿಯ ಮೇಲೆ ಮದ್ಯಪಾನದಂತಹ ಬೀರುವ ದುಷ್ಪರಿಣಾಮಗಳನ್ನು ಸುರ್ಜಿತ್ ಅವರಿಗೆ ಮನದಟ್ಟು ಮಾಡಿದ. ಆ ಪೈಕಿ ಒಬ್ಬನಂತೂ ತನ್ನ ತಂದೆ ಮದ್ಯಪಾನ ತ್ಯಜಿಸುವವರೆಗೆ ಉಪವಾಸ ಹೂಡುವುದಾಗಿ ಘೋಷಿಸಿದ. ಇದರಿಂದ ಸ್ಫೂರ್ತಿಗೊಂಡ ಇತರರೂ ತಮ್ಮ ತಮ್ಮ ಮನಗಳಲ್ಲೊ ಹೋರಾಟ ಆರಂಭಿಸಿದರು. ಇದರ ಜತೆಗೆ ಮಕ್ಕಳ ಸೈನ್ಯ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಅನಧಿಕೃತ ಮದ್ಯದಂಗಡಿಗಳ ಮೇಲೆ ದಾಳಿ ನಡೆಸುವಂತೆ ಮನವಿ ಮಾಡಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಲಕರು ಅವನಿಗೆ ಬೆದರಿಕೆ ಹಾಕತೊಡಗಿದರು. ಆದರೆ ಇದ್ಯಾವುದಕ್ಕೂ ಜಗ್ಗದ ಅವನು ಪೊಲೀಸರ ಸಹಕಾರದೊಂದಿಗೆ ಸಂಗಡಿಗರೊಂದಿಗೆ ಹೋರಾಟ ಮುಂದುವರಿಸಿದ. ಹೀಗೆ ಸುರ್ಜಿತ್ ಎನ್ನುವ ಬಾಲ ಹೋರಾಟಗಾರ ರೂಪುಗೊಂಡಿದ್ದ. ಹೋರಾಟಕ್ಕೆ ಸಿಕ್ಕ ಬೆಂಬಲ
ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಷನ್ ಮತ್ತು ಮಕ್ಕಳ ಕೌನ್ಸಿಲ್‌ಗಳ ಮುಖ್ಯ ಯೋಜನೆಯಾದ ಬಾಲ್ ಮಿತ್ರ ಗ್ರಾಮ ಯೋಜನೆಯ ಬೆಂಬಲದೊಂದಿಗೆ ಸುರ್ಜಿತ್ 5 ಗ್ರಾಮಗಳಿಗೆ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿದ. ಅಲ್ಲಿ ಮದ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ ಅವರಲ್ಲಿ ಜಾಗೃತಿ ಮೂಡಿಸಿದ. ವಿಲೇಜ್ ಕೌನ್ಸಿಲ್‌ನ ಸದಸ್ಯರು ಸೇರಿ ಸುಮಾರು 410 ಮಂದಿಯನ್ನು ತನ್ನ ಗುಂಪಿಗೆ ಸೇರಿಸಿಕೊಂಡ. ಇತರೆಡೆಗೂ ಹಬ್ಬಿದ ಹೋರಾಟ
ಸುರ್ಜಿತ್ ಮತ್ತು ಸಂಗಡಿಗರ ಚಟುವಟಿಕೆಗಳಿಂದ ಪ್ರೇರಣೆ ಪಡೆದ ದಿಲಾಯ್ ಮತ್ತು ಸಹ್ಯ ಗ್ರಾಮಗಳಲ್ಲಿ ಮಕ್ಕಳು ಮತ್ತು ಮಹಿಳೆಯರಯ ಕೂಡಾ ಅನ್ಯಾಯದ ವಿರುದ್ಧ ಮಾತನಾಡತೊಡಗಿದರು. ಮದ್ಯಪಾನ, ಕಿರುಕುಳಗಳನ್ನು ವಿರೋಧಿಸಿ ಬೀದಿಗಿಳಿದು ಹೋರಾಟ ನಡೆಸತೊಡಗಿದರು. ಅಲ್ಲೂ ಮದ್ಯದಂಗಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಎರಡು ವರ್ಷಗಳ ನಿರಂತರ ಹೋರಾಟದ ಫಲವಾಗಿ 5 ಮದ್ಯದಂಗಡಿಗಳಿಗೆ ಬೀಗ ಬಿತ್ತು. ಅಲ್ಲಿಗೆ ಮುಗಿಯಲಿಲ್ಲ ಹೋರಾಟ
ಮದ್ಯಂಗಡಿ ಮುಚ್ಚುವುದರೊಂದಿಗೆ ಸುರ್ಜಿತ್ ಮತ್ತು ಸಂಗಡಿಗರ ಒಂದು ಹಂತದ ಹೋರಾಟವೇನೋ ಅಂತ್ಯವಾಗಿತ್ತು. ಜತೆಗೆ ಇನ್ನೊಂದು ಜವಾಬ್ದಾರಿಯನ್ನೂ ಅವನ ಸಂಘ ಹೊತ್ತುಕೊಂಡಿತ್ತು. ಮದ್ಯಪಾನಿಗಳಾಗಿದ್ದ ಪಾಲಕರ ಮಕ್ಕಳನ್ನು ಶಾಲೆಗೆ ಮರಳಿ ಸೇರಿಸಿ ಅವರ ಭವಿಷ್ಯಕ್ಕೆ ದಾರಿ ತೋರಲಾಯಿತು. ಸುರ್ಜಿತ್‌ನ ಗುರಿ
ಹೀಗೆ ಹೋರಾಟದ ಮೂಲಕ ಛಾಪು ಮೂಡಿಸಿಕೊಂಡ ಸುರ್ಜಿತ್ ಈಗ ಹನ್ನೊಂದನೇ ತರಗತಿ ವಿದ್ಯಾರ್ಥಿ. ಎಂಬಿಬಿಎಸ್ ಅಥವಾ ಕೃಷಿ ರಂಗದಲ್ಲಿ ಪದವಿಗಳಿಸುವುದು ಸದ್ಯ ಅವನ ಮುಂದಿರುವ ಗುರಿ. ಪ್ರಶಸ್ತಿ ಘೋಷಣೆ
ಜುಲೈ ಆರಂಭದಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ 2020ರ ಡಯಾನಾ ಪುರಸ್ಕಾರಕ್ಕೆ ಸುರ್ಜಿತ್ ಹೆಸರು ಘೋಷಿಸಲಾಗಿತ್ತು. ಏನಿದು ಡಯಾನಾ ಪುರಸ್ಕಾರ?
ರಾಜಕುಮಾರಿ ಡಯಾನಾ ಸ್ಮರಣಾರ್ಥ 1999ರಲ್ಲಿ ಡಯಾನಾ ಪುರಸ್ಕಾರ ಸ್ಥಾಪಿಸಲಾಯಿತು. ಪ್ರಪಂಚದಾದ್ಯಂತ ಇರುವ 9ರಿಂದ 25 ವರ್ಷದೊಳಗಿನ ಯುವ ಸಾಧಕರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. *ರಮೇಶ್ ಬಿ.