Advertisement

ಅಂತ್ಯೋದಯ ರೈಲು : ಜ. 5ರಂದು ಕಾಸರಗೋಡಿನಲ್ಲಿ ಕೊನೆಯ ನಿಲುಗಡೆ

02:10 AM Dec 26, 2018 | Team Udayavani |

ಕಾಸರಗೋಡು: ಅಂತ್ಯೋದಯ ರೈಲು ಎಕ್ಸ್‌ಪ್ರೆಸ್‌ಗೆ ಜನವರಿಯಿಂದ ಎರಡು ನಿಲುಗಡೆ ಕಡಿಮೆಯಾಗಲಿದೆ. ತಾತ್ಕಾಲಿಕವಾಗಿ ಮಂಜೂರು ಮಾಡಿದ ಕಾಸರಗೋಡು, ಆಲಪ್ಪುಳ ನಿಲುಗಡೆಗಳ ಕಾಲಾವಧಿ ಮುಂದಿನ ತಿಂಗಳು ಮುಗಿಯುವುದರಿಂದ ಈ ಎರಡು ನಿಲುಗಡೆಗಳು ರದ್ದಾಗಲಿವೆ. ಅದರಂತೆ ಕಾಸರಗೋಡಿನಲ್ಲಿ  ಜ. 5ರವರೆಗೂ ಆಲಪ್ಪುಳದಲ್ಲಿ ಜ. 12ರ ತನಕವೂ ನಿಲುಗಡೆ ಮಂಜೂರು ಮಾಡಲಾಗಿತ್ತು. ಈ ನಿಲುಗಡೆಗಳು ನಿಗದಿತ ಕಾಲಾವಧಿ ಮುಗಿದ ಕೂಡಲೇ ರದ್ದಾಗಲಿವೆ. ಇದೇ ವೇಳೆ ತಿರೂರಿನಲ್ಲಿ ನೀಡಿದ ನಿಲುಗಡೆ ಮಾರ್ಚ್‌ ತಿಂಗಳಿಗೆ ಮುಗಿಯಲಿದೆ.

Advertisement

6 ತಿಂಗಳಿಗೆ ತಾತ್ಕಾಲಿಕವಾಗಿ ಮಂಜೂರು ಮಾಡಿದ ನಿಲುಗಡೆಗಳನ್ನು ಬಳಿಕ ಸಾಮಾನ್ಯವಾಗಿ ಮುಂದುವರಿಸಲಾಗುವುದು. ಆದರೆ ರೈಲ್ವೇ ಟೈಮ್‌ ಟೇಬಲ್‌ನಿಂದ ರೈಲು ಸಂಚಾರದ ವರೆಗೆ ಸಮಸ್ಯೆ ಸೃಷ್ಟಿಸಿದ ಅಂತ್ಯೋದಯದ ಈ ನಿಲುಗಡೆಗಳು ಇನ್ನು ಮುಂದುವರಿಯದು ಎಂಬ ಆತಂಕದಲ್ಲಿ ಪ್ರಯಾಣಿಕರಿದ್ದಾರೆ. ಈಗಾಗಲೇ ಆದಾಯ ಕಡಿಮೆ ಎಂದೂ ಹೇಳಲಾಗುತ್ತಿದೆ. ಸಂಪೂರ್ಣ ಜನರಲ್‌ ಕಂಪಾರ್ಟ್‌ಮೆಂಟ್‌ಗಳಾಗಿ ಸಾಗುವ ಈ ರೈಲುಗಾಡಿಗೆ ಕೊಚ್ಚುವೇಳಿಯಿಂದ ಮಂಗಳೂರು ಮಧ್ಯೆ ಕೇವಲ 9 ನಿಲುಗಡೆ ಮಾತ್ರವಿದೆ. ಕೊಲ್ಲಂ, ಆಲಪ್ಪುಳ, ಎರ್ನಾಕುಳಂ ಜಂಕ್ಷನ್‌, ತೃಶ್ಶೂರು, ಶೋರ್ನೂರು, ತಿರೂರು, ಕಲ್ಲಿಕೋಟೆ, ಕಣ್ಣೂರು, ಕಾಸರಗೋಡು ಇವುಗಳು ರೈಲಿನ ನಿಲುಗಡೆ ಕೇಂದ್ರಗಳು.

ವಾರದಲ್ಲಿ ಎರಡು ದಿನ ಮಾತ್ರ ಈ ರೈಲು ಗಾಡಿ ಸಂಚರಿಸುತ್ತಿದೆ. ಗುರುವಾರ ಮತ್ತು ಶನಿವಾರಗಳಂದು ಕೊಚ್ಚುವೇಳಿಯಿಂದ ಹೊರಟರೆ ಶುಕ್ರವಾರ ಹಾಗೂ ರವಿವಾರಗಳಂದು ಮಂಗಳೂರಿನಿಂದ ಹಿಂದಿರುಗುತ್ತದೆ. ರಾತ್ರಿ 9.25ಕ್ಕೆ ಕೊಚ್ಚುವೇಳಿಯಿಂದಲೂ, ರಾತ್ರಿ 8ಗಂಟೆಗೆ ಮಂಗಳೂರಿನಿಂದಲೂ ಈ ರೈಲು ಸಂಚಾರ ನಡೆಸುತ್ತಿದೆ. ಈ ರೈಲು ಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡಬೇಕೆಂದು ನಡೆಸಿದ ಹೋರಾಟದ ಫಲವಾಗಿ ನಿಲುಗಡೆ ಲಭಿಸಿತ್ತು. ಜುಲೈ 6ರಂದು ಪ್ರಥಮವಾಗಿ ಕಾಸರಗೋಡಿನಲ್ಲಿ ಮತ್ತು  ಜುಲೈ 12ರಂದು ಆಲಪ್ಪುಳದಲ್ಲಿ ರೈಲು ಗಾಡಿಗೆ ನಿಲುಗಡೆ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ 6 ತಿಂಗಳು ಕಳೆಯುವ ಜನವರಿ 5ರಂದು ಕಾಸರಗೋಡಿನಲ್ಲಿ ಮತ್ತು ಜನವರಿ 12ರಂದು ಆಲಪ್ಪುಳದಲ್ಲಿ  ನಿಲುಗಡೆ ರದ್ದಾಗಲಿದೆ. ಈ ಮಧ್ಯೆ ನಿಲುಗಡೆ ಮುಂದುವರಿಸುವ ಯಾವುದೇ ಆದೇಶವನ್ನು ರೈಲ್ವೇ ವಿಭಾಗವು ಇನ್ನೂ ಹೊರಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next