ಸಿಂದಗಿ: ನೈಸರ್ಗಿಕ ವೈಪರೀತ್ಯದ ಪರಿಣಾಮ ಅಲ್ಪ ಮಳೆ ಹಾಗೂ ಅಧಿಕ ಬಿಸಿಲು ಇರುವ ಬಯಲು ಸೀಮೆಯಲ್ಲಿ ಕೃಷಿ ಕಷ್ಟವಾಗುತ್ತಿದೆ. ಆರಂಭದಲ್ಲಿ ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದರು. ಜನಸಂಖ್ಯೆ ಬೆಳವಣಿಗೆ ತಕ್ಕಂತೆ ಆಹಾರ ಉತ್ಪಾದನೆಯು ಹೆಚ್ಚು ಮಾಡಬೇಕಾಗುತ್ತದೆ. ತಾಂತ್ರಿಕತೆ ಬಳಕೆ ಮಾಡಬೇಕಾಗುತ್ತದೆ. ಅಲ್ಲದೇ ಕೃಷಿ ಪದ್ದತಿಯಲ್ಲಿ ಬದಲಾವಣೆ ಮಾಡುವ ಮೂಲಕ ಆಹಾರ ಉತ್ಪಾದನೆ ಹೆಚ್ಚಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿಕರು ಆದಾಯ ಕೊಡುವಂತಹ ಅಂತರ ಬೆಳೆ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ.
ಅಂತರ ಬೆಳೆ ಒಂದೇ ಭೂಮಿಯಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಏಕಕಾಲದಲ್ಲಿ ಬೆಳೆಯುವ ಒಂದು ಕೃಷಿ ಪದ್ಧತಿಯಾಗಿದೆ. ಮುಖ್ಯವಾಗಿ ಅಂತರ ಬೆಳೆ ಬೆಳೆಯುವುದರಿಂದ ಒಂದೇ ಭೂಮಿಯಿಂದ ಹೆಚ್ಚಿನ ಆದಾಯವನ್ನು ರೈತ ಪಡೆಯುತ್ತಾನೆ. ಅಂತರ ಬೆಳೆಗಳು ಪರಸ್ಪರ ಬೆಳವಣಿಗೆ ಸಹ ಸಹಾಯ ಮಾಡುತ್ತದೆ.
ರೈತ ಅಂತರ ಬೆಳೆ ಬೆಳೆಯುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ. ಅಂತರ ಬೆಳೆ ಬೆಳೆಯುವುದರಿಂದ ಒಂದೆ ಕೃಷಿ ಭೂಮಿಯಲ್ಲಿ ಎರಡು ವಿಧ ಬೆಳೆ ಬೆಳೆದಂತಾಗುತ್ತದೆ. ಅಲ್ಲದೇ ಬಳಸುವ ರಾಸಾಯನಿಕ ರಸಗೊಬ್ಬರ ಬಳಕೆಯಲ್ಲಿ ಕಡಿತವಾಗುತ್ತದೆ. ಪೋಷಕಾಂಶಗಳು ಪರಸ್ಪರ ಹಂಚಿಕೆಯಾಗುವುದರಿಂದ ಬೆಳೆ ಉತ್ಪನ್ನ ಹೆಚ್ಚಿಸುತ್ತದೆ. ಕಳೆ ನಿಗ್ರಹ, ಮತ್ತು ಕೀಟಗಳು ಮತ್ತು ರೋಗಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಪ್ರಾತ್ಯಕ್ಷಿಕೆ ಕೈಗೊಂಡ ಕ್ಷೇತ್ರಗಳಿಗೆ ಸಿಂದಗಿ, ಆಲಮೇಲ ಮತ್ತು ದೇವರ ಹಿಪ್ಪರಗಿ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ, ಸಹಾಯಕ ಕೃಷಿ ನಿರ್ದೇಶಕ ಮಹದೇವಪ್ಪ ಏವೂರ್, ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಸೇರಿದಂತೆ ಇನ್ನೂಳಿದ ಕೃಷಿ ಅಧಿಕಾರಿಗಳು ನಿರಂತರವಾಗಿ ಬೇಟಿ ನೀಡಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಅಂತರ ಬೆಳೆ ಬೆಳೆಯುವುದು ಒಂದು ಕೃಷಿ ಪದ್ಧತಿಯಲ್ಲೊಂದು. ಒಂದೇ ಸಮಯದಲ್ಲಿ ಮತ್ತು ಒಂದೇ ಭೂಮಿಯಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ನೆಡುವುದು ಅಥವಾ ಬೆಳೆಸುವುದು ಒಳಗೊಂಡಿರುವ ವಿಧಾನವಾಗಿದೆ. ಅಂತರ ಬೆಳೆ ಬೆಳೆಯಲು ರೈತರು ಮುಂದಾಗಬೇಕು. ಅಂತರ ಬೆಳೆ ಪದ್ಧತಿಯಿಂದ ಅನುಸರಿಸುವುದರಿಂದ ರೈತರು ಆರ್ಥಿಕತೆ ಹೆಚ್ಚಿಸಿಕೊಳ್ಳಲು ಸಾಧ್ಯ. ಎಂದು ಸಿಂದಗಿ ಸಹಾಯಕ ಕೃಷಿ ನಿರ್ದೇಶಕರಾದ ಡಾ.ಎಚ್.ವಾಯ್. ಸಿಂಗೆಗೋಳ ಹೇಳಿದ್ದಾರೆ.
ಇದನ್ನೂ ಓದಿ:ನನ್ನ ಹೇಳಿಕೆಯನ್ನು ಉದ್ಧೇಶಪೂರ್ವಕವಾಗಿ ತಿರುಚಿದ್ದರ ಬಗ್ಗೆ ನನಗೆ ಆಶ್ಚರ್ಯವಿಲ್ಲ : ಮುಫ್ತಿ
ಇಲಾಖೆಯ ಶಿಫಾರಸಿನ ಮೇಲೆ ಅಂತರ ಬೆಳೆ ಬೆಳೆಯುವ ಮೂಲಕ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು. ಒಂದೇ ಸಮಯಕ್ಕೆ ಒಂದೇ ಭೂಮಿಯಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಲು ಸಾಧ್ಯ. ಆದ್ದರಿಂದ ರೈತರು ಅಂತರ ಬೆಳೆ ಬೆಳೆಯಲು ಮುಂದಾಗಬೇಕು. ಕಬ್ಬು, ತೊಗರೆ, ಹತ್ತಿ ಮುಂತಾದ ಬೆಳೆಗಳಲ್ಲಿ ಅಂತರ ಬೆಳೆ ಬೆಳೆದು ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕು. ಎಂದು ಸಿಂದಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ತಿಳಿಸಿದ್ದಾರೆ.
ಅಂತರ ಬೆಳೆಯುವಿಕೆಯು ಮಣ್ಣಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಎರಡನೇ ಬೆಳೆ ಒದಗಿಸುವ ಹೆಚ್ಚುವರಿ ಮಣ್ಣಿನ ಹೊದಿಕೆ ಸವೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಸ್ಯಗಳು ಹೆಚ್ಚುವರಿ ನೀರನ್ನು ನೆನೆಸಲು ಸಹಾಯ ಮಾಡುತ್ತದೆ. ಆದ್ದರಿಂದ ರೈತರು ಅಂತರ ಬೆಳೆ ಬೆಳೆಯಲು ಮುಂದಾಗಿ ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರ, ದೇವರಹಿಪ್ಪರಗಿ. ಕೃಷಿ ಅಧಿಕಾರಿ, ಸೋಮನಗೌಡ ಬಿರಾದಾರ ಅಭಿಪ್ರಾಯಪಟ್ಟಿದ್ದಾರೆ.
ರಮೇಶ ಪೂಜಾರ