ಈ ಜಗತ್ತು ಎಲ್ಲಾ ಜೀವಸಂಕುಲಗಳನ್ನು ಹೊಂದಿದೆ. ಈ ಜೀವಸಂಕುಲದಲ್ಲಿ ಬೇರೆ ಬೇರೆ ರೀತಿಯ ಪ್ರಾಣಿಗಳು ಕಾಣಸಿಗುತ್ತವೆ. ಕೆಲವು ಪ್ರಾಣಿಗಳು ನೋಡಲು ಸುಂದರವಾಗಿರುತ್ತವೆ. ಇರುವೆಯಿಂದ ಹಿಡಿದು ಆನೆಯವರೆಗೂ ಎಲ್ಲಾ ರೀತಿಯ ಪ್ರಾಣಿಗಳು ಕಾಣಸಿಗುತ್ತವೆ.
ಇರುವೆ ಒಂದು ಒಣ್ಣ ಜೀವಿ. ಗುಂಪಾಗಿ ಜೀವಿಸುವ ಇರುವೆಗಳ ಬದುಕಿನ ಶೈಲಿಯ ಬಗ್ಗೆ ಎಲ್ಲರಿಗೂ ಕುತೂಹಲ. ಇವುಗಳಲ್ಲಿ ರಾಣಿ ಇರುವೆ, ಕೆಂಪಿರುವೆ, ಕಟ್ಟಿರುವೆ ಮುಂತಾದವುಗಳಿವೆ. ಹೀಗೆ ಇರುವೆಯ ಗಾತ್ರ ಚಿಕ್ಕದಾದರೂ ಇಡೀ ಮನೆಯನ್ನೇ ಹರಡಿರುತ್ತದೆ. ಒಂದು ಸಕ್ಕರೆಯ ತುಂಡು ನೆಲದಲ್ಲಿ ಬಿದ್ದರೆ ಸಾಕು, ಅದನ್ನು ಹುಡುಕಿಕೊಂಡು ಎಲ್ಲಿದ್ದರೂ “ನಾವು ರೆಡಿ’ ಎಂದು ಹಾಜರಾಗಿ ಬಿಡುತ್ತವೆ. ಸಿಹಿತಿಂಡಿಗಳ ಪರಿಮಳವನ್ನು ಅವು ಹೇಗೆ ಗ್ರಹಿಸುತ್ತವೋ ತಿಳಿಯುವುದಿಲ್ಲ !
ಇನ್ನು ಹೇಳಬೇಕೆಂದರೆ, ಅವುಗಳು ಎಲ್ಲೇ ಹೋದರೂ, ಎಲ್ಲೇ ಬಂದರೂ ಒಂದು ಇನ್ನೊಂದಕ್ಕೆ “ನೀನೆಲ್ಲೊ ನಾನಲ್ಲೆ’ ಎಂದು ಹೇಳುವಂತೆ ಒಂದಾಗಿಯೇ ಇರುವುದು ಭಾಸವಾಗುತ್ತದೆ. ಎಲ್ಲಾ ಇರುವೆಗಳು ಶಿಸ್ತಿನ ಸಿಪಾಯಿಗಳಂತೆ ನೇರವಾದ ಸಾಲಿನಲ್ಲಿ ಎಲ್ಲಾ ಒಂದರ ನಂತರ ಇನ್ನೊಂದು ಬರುತ್ತವೆ. ಇರುವೆ ಸಾಲನ್ನು ಛಿದ್ರ ಮಾಡಲು ನಮ್ಮ ಮನೆಯಲ್ಲಿ ಅರಸಿನ ಹುಡಿ ಬಳಸುವುದುಂಟು.
ಇನ್ನು ಯಾವುದಾದರೂ ಒಂದು ಇರುವೆ ಸತ್ತು ಹೋದರೆ ಅದನ್ನು ನೋಡಲು ಅದರ ಎಲ್ಲ ಕುಟುಂಬಸ್ಥ ಇರುವೆಗಳು ಬರುತ್ತವೆ. ಅವುಗಳನ್ನು ಹಾಗೆಯೇ ಬಿಟ್ಟರೆ ಸತ್ತಿರುವ ಇರುವೆಯನ್ನು ಹೊತ್ತುಕೊಂಡು ಹೋಗುತ್ತವೆ. ಇವೇನು, ಶವಸಂಸ್ಕಾರವನ್ನು ಮಾಡಿಬಿಡುವಂತೆ ಭಾಸವಾಗುತ್ತದೆ. ಇದನ್ನೆಲ್ಲ ನೋಡಿದರೆ ಒಗ್ಗಟ್ಟಿಗೆ ಇನ್ನೊಂದು ಹೆಸರೇ ಇರುವೆಗಳು ಎನ್ನಬಹುದು.
ಇರುವೆಗಳನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅವುಗಳ ಶಿಸ್ತು, ಒಗ್ಗಟ್ಟು ಮುಂತಾದ ಗುಣಗಳು ಮನುಷ್ಯರಲ್ಲಿ ಕಡಿಮೆ ಎನ್ನುವುದೇ ಬೇಸರ ಸಂಗತಿ. ಇವುಗಳನ್ನೆಲ್ಲ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸುಂದರವಾಗಿರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಚೈತ್ರಾ
ದ್ವಿತೀಯ ಬಿ.ಕಾಂ., ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು