Advertisement
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಂಜೆ ರಾಜ್ಯ ಉಸ್ತುವಾರಿ ಮುರಳೀಧರರಾವ್ ನೇತೃತ್ವದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಕಾಂಗ್ರೆಸ್ ನಾಯಕರು ವಿಚಲಿತರಾಗಿ ಪ್ರಧಾನಿ ಮತ್ತು ಯಡಿಯೂರಪ್ಪ ಅವರ ವಿರುದ್ಧ ಏಕವಚನ, ಕೀಳು ಪದಗಳ ಬಳಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ಅದೇ ಧಾಟಿಯಲ್ಲಿ ಉತ್ತರ ನೀಡಲು ಸಭೆಯಲ್ಲಿ ಸೂಚಿಸಲಾಗಿದೆ. ಇದರ ಜತೆಗೆ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಗಳನ್ನು ಜನರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಿಳಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮುರಳೀಧರರಾವ್ ಅವರು ಪಕ್ಷದ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
Related Articles
ಪಕ್ಷದ ಪರಿವರ್ತನಾ ಯಾತ್ರೆ ಪೂರ್ಣಗೊಂಡ ಕಡೆ ನವಶಕ್ತಿ ಸಮಾವೇಶಗಳನ್ನು ನಡೆಸಲು ಈಗಾಗಲೇ ತೀರ್ಮಾನಿಸಿದ್ದು, ಇದಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸುವ ಬಗ್ಗೆ ಚರ್ಚಿಸಲಾಗಿದೆ. ಪರಿವರ್ತನಾ ಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಬೇಕಾಗಿತ್ತಾದರೂ ದಿನಗಳು ಹೊಂದಾಣಿಕೆಯಾಗದ ಕಾರಣ ಇದುವರೆಗೆ ಒಂದಿಬ್ಬರು ಹೊರತುಪಡಿಸಿ ಬೇರೆ ಯಾರೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಅವರ ದಿನಾಂಕ ಹೊಂದಾಣಿಕೆ ಮಾಡಿಕೊಂಡು ನವಶಕ್ತಿ ಸಮಾವೇಶಗಳ ದಿನಾಂಕ ಮತ್ತು ಸ್ಥಳ ನಿಗದಿ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
Advertisement
ಅರುಣ್ ಸಿಂಗ್ ರಾಜ್ಯಕ್ಕೆ:ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಡಿ. 20ರಿಂದ 22ರವರೆಗೆ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರದುರ್ಗ, ದಾವಣಗೆರೆ, ಧಾರವಾಡ ಮತ್ತು ಬೆಂಗಳೂರು ಜಿಲ್ಲಾ ಸಮಿತಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಜತೆಗೆ ಆಯ್ದ ಕೆಲವು ವಿಧಾನಸಭಾ ಕ್ಷೇತ್ರ ಮಟ್ಟದ ಸಭೆ, ಬೂತ್ ಕಮಿಟಿ ಸಭೆ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿಯಲ್ಲೂ ಭಾಗವಹಿಸಲಿದ್ದಾರೆ ಎಂಬುದನ್ನು ಸಭೆಯಲ್ಲಿ ತಿಳಿಸಲಾಯಿತು.