Advertisement

ಉತ್ತರಪತ್ರಿಕೆಗಳ ಬುಕ್‌ಲೆಟ್‌ ಬದಲಿಸಿರುವುದು ಬಹಿರಂಗ

10:08 AM Jun 23, 2017 | Team Udayavani |

ಬೆಂಗಳೂರು: ಸಹಾಯಕ ಸರಕಾರಿ ಅಭಿಯೋಜಕರ ನೇಮಕಾತಿಯಲ್ಲಿ ಆಯ್ಕೆಗೊಂಡ ಕೆಲವು ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಬುಕ್‌ಲೆಟ್‌ಗಳನ್ನೇ ಬದಲು ಮಾಡಿ ಹೆಚ್ಚು ಅಂಕ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. 2014ನೇ ಸಾಲಿನ 197 ಎಪಿಪಿ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಶೇ. 80ರಷ್ಟು ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು, ಜೂ. 13ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸರಕಾರಿ ಅಭಿಯೋಜಕ ನಿರ್ದೇಶನಾಲಯದ ಮಾಜಿ ಹೆಚ್ಚುವರಿ ನಿರ್ದೇಶಕ ಚಂದ್ರಶೇಖರ್‌ ಹಿರೇಮಠ್ ಆಡಳಿತಾಧಿಕಾರಿಯಾಗಿದ್ದ ನಾರಾಯಣ ಸ್ವಾಮಿ ವಿರುದ್ಧ  ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ ಆರೋಪಿ ನಾರಾಯಣಸ್ವಾಮಿ ತನಗೆ ಬೇಕಾದ ಅಭ್ಯರ್ಥಿಯೊಬ್ಬರಿಗೆ ಉತ್ತರಪತ್ರಿಕೆಯ ಬುಕ್‌ಲೆಟ್‌ ಅನ್ನೇ ಬದಲು ಮಾಡಿ, ಪ್ರತ್ಯೇಕ ಬುಕ್‌ಲೆಟ್‌ನಲ್ಲಿ ಉತ್ತರ ಬರೆದು ಅಂಕ ನೀಡಿದ್ದಾರೆ. ಜತೆಗೆ ಹೆಚ್ಚು ಅಂಕ ಪಡೆದು ಜನರಲ್‌ ಮೆರಿಟ್‌ ಆಧಾರದಲ್ಲಿ ಹುದ್ದೆಗೆ ಆಯ್ಕೆಯಾಗಬೇಕಿದ್ದವರವನ್ನು ತನ್ನ ಕೈಚಳಕದಿಂದ ಆಯ್ಕೆಪಟ್ಟಿಯಲ್ಲಿ ಹಿಂದಕ್ಕೆ ತಳ್ಳಿರುವ ಸಂಗತಿಯನ್ನು ಉಲ್ಲೇಖೀಸಿದ್ದಾರೆ.

Advertisement

ಇಡೀ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಇಬ್ಬರು ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಬರೋಬ್ಬರಿ 6 ಸಂಪುಟಗಳ, 3,000 ಸಾವಿರ ಪುಟಗಳಲ್ಲಿ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ನಾರಾಯಣಸ್ವಾಮಿ, ತನಗೆ ಬೇಕಾದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ತಿದ್ದಿರುವುದು ವಿಧಿವಿಜ್ಞಾನ ಪ್ರಯೋಗಾಲಯದಿಂದ ದೃಢಪಟ್ಟಿರುವ 22 ಉತ್ತರ ಪತ್ರಿಕೆಗಳು, ಹೆಚ್ಚುವರಿ ಅಂಕ ನೀಡಿರುವುದಕ್ಕೆ ಸಂಬಂಧಿಸಿದ ಉತ್ತರ ಪತ್ರಿಕೆಗಳು, ಅವರೇ ಬರೆದಿರುವ ಪ್ರತ್ಯೇಕ ಬುಕ್‌ಲೆಟ್‌ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

197 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಕೊಡಲಾಗಿದ್ದ ಕಾನೂನಿಗೆ ಸಂಬಂಧಿಸಿದ ಮೂವರು ಪ್ರತ್ಯೇಕ ಪ್ರಶ್ನೆಪತ್ರಿಕೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದ 24 ಮಂದಿ ನ್ಯಾಯಾಧೀಶರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ತಿದ್ದಲಾಗಿರುವ ಉತ್ತರ ಪತ್ರಿಕೆಗಳನ್ನು ಹಿಡಿದು ಎಲ್ಲ ನ್ಯಾಯಾಧೀಶರನ್ನು ವಿಚಾರಣೆ ನಡೆಸಿದಾಗ, ಯಾರೊಬ್ಬರ ಬರವಣಿಗೆ  ತಮ್ಮದಲ್ಲ ಎಂದಿದ್ದು, ಈ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಉನ್ನತ ಮೂಲ ‘ಉದಯವಾಣಿ’ಗೆ ತಿಳಿಸಿದೆ. ಸೂತ್ರಧಾರ ಹೆಚ್ಚುವರಿ ನಿರ್ದೇಶಕರಾಗಿದ್ದ ಚಂದ್ರಶೇಖರ್‌ ಹಿರೇಮಠ್ ಆಗಿದ್ದಾರೆ. ಪರೀಕ್ಷಾ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರಿಂದ, ಅವರ ಗಮನಕ್ಕೆ ಬಾರದೇ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಹೀಗಾಗಿ ನೇಮಕಾತಿ ಅಕ್ರಮಕ್ಕೆ ನೇರ ಹೊಣೆಯಾಗುತ್ತಾರೆ. ಆಡಳಿತಾಧಿಕಾರಿ ನಾರಾಯಣಸ್ವಾಮಿಯೇ ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ ಎಂದು ಸದ್ಯಕ್ಕೆ ಸಾಬೀತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಸರಕಾರಿ ಅಭಿಯೋಜಕ ನಿರ್ದೇಶನಾಲಯ 2014ರಲ್ಲಿ 197 ಹುದ್ದೆಗಳ ಸಹಾಯಕ ಸರಕಾರಿ ಅಭಿಯೋಜಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸರಕಾರಿ ಅಭಿಯೋಜಕ ನಿರ್ದೇಶನಾಲಯ ಹೆಚ್ಚುವರಿ ನಿರ್ದೇಶಕ ಚಂದ್ರಶೇಖರ್‌ ಹಿರೇಮಠ್ ಹಾಗೂ ಆಡಳಿತಾಧಿಕಾರಿ ನಾರಾಯಣಸ್ವಾಮಿ ವಿರುದ್ಧ ಚಿಕ್ಕಮಗಳೂರಿನ ಎಚ್‌.ಟಿ. ರವಿ ನೀಡಿದ್ದ ದೂರಿನ ಅನ್ವಯ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಈ ಸಂಬಂಧ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ 2014ರ ಡಿ. 16ರಂದು ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next