ಗಂಗಾವತಿ: ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಸರಕಾರದಿಂದ ಯಾವುದಾದರೂ ಆದೇಶ, ನಾಮನಿರ್ದೇಶನ ಹಾಗೂ ಅಧಿಕಾರಿಗಳ ವರ್ಗಾವಣೆ ಮಾಡಿಸಿದರೆ ಇದಕ್ಕೆ ವಿಧಾಸಭಾ ಚುನಾವಣೆಯಲ್ಲಿ ನನ್ನ ಕೈಯಲ್ಲಿ ಸೋತಿಸುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪದೇ ಪದೇ ಅಡ್ಡಗಾಲು ಹಾಕುತ್ತಿದ್ದು ನನಗಿರುವ ಮಾಹಿತಿಯ ಪ್ರಕಾರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮುಖಂಡರು ಅನ್ಸಾರಿಯನ್ನು ಡಸ್ಟ್ಬಿನ್‌ಗೆ ಎಸೆಯಲಿದ್ದು ಅಲ್ಲಿಯವರೆಗೆ ನಾನು ತಾಳ್ಮೆಯಿಂದ ಇರುವುದಾಗಿ ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯರು, ಕಿರಿಯರು ಎನ್ನದೇ ಸ್ವಂತ ಪಕ್ಷ ಕಾಂಗ್ರೆಸ್ ಸೇರಿ ಅನ್ಯ ಪಕ್ಷದ ಮುಖಂಡರನ್ನು ಟೀಕಿಸುವ ಅನ್ಸಾರಿ ಪ್ರಜಾಪ್ರಭುತ್ವದಲ್ಲಿ ಇಲ್ಲದವರಂತೆ ವರ್ತಿಸುತ್ತಿದ್ದು ಜನತೆ ಸೋಲಿನ ರುಚಿ ತೋರಿಸಿದರೂ ಬುದ್ಧಿಕಲಿತಂತೆ ಕಾಣುತ್ತಿಲ್ಲ. ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯನ್ನು ಹೊಸದಾಗಿ ರಚಿಸಿ ನನ್ನ ಆತ್ಮೀಯರನ್ನು ಸದಸ್ಯರನ್ನಾಗಿ ನೇಮಕ ಮಾಡಿಸಿಕೊಂಡು ಬಂದರೆ ವೈಧ್ಯಾಧಿಕಾರಿಗಳಿಗೆ ಒತ್ತಡ ತಂದು ನೇಮಕ ತಡೆಯಲಾಗಿದೆ. ಅತ್ಯುತ್ತಮವಾಗಿದ್ದ ಕೆಲ ಅಧಿಕಾರಿಗಳನ್ನು ವರ್ಗಾ ಮಾಡಿಸಲಾಗಿದೆ.
ಅನುದಾನ ವಾಪಸ್ ಹೋಗುವಂತೆ ಅನ್ಸಾರಿ ಮನೆಯಲ್ಲಿ ಕುಳಿತು ಕ್ಷೇತ್ರಕ್ಕೆ ಹಿತವಲ್ಲದ ಕಾರ್ಯ ಮಾಡುತ್ತಿದ್ದು ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ತಮಗೂ ಆತ್ಮೀಯರಾಗಿದ್ದು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ಅನ್ಸಾರಿ ಬಗ್ಗೆ ಸಮಯ ಬಂದಾಗ ಉತ್ತರ ಕೊಡಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾದರೆ ಸೂಕ್ತ ಪರಿಣಾಮವನ್ನು ಅನ್ಸಾರಿ ಎದುರಿಸಬೇಕಾಗುತ್ತದೆ ಎಚ್ಚರಿಕೆ ಎಂದು ಗಾಲಿ ಜನಾರ್ದನರೆಡ್ಡಿ ಆಕ್ರೊಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ: ಶ್ರೀರಾಮಮಂದಿರ ನಿರ್ಮಿಸಿ ಐದು ಶತಮಾನಗಳ ಭಾರತೀಯರ ಕನಸು ನನಸು ಮಾಡುವಲ್ಲಿ ಶ್ರೀರಾಮ ಟ್ರಸ್ಟ್ ನವರಿಗೆ ಸಂಪೂರ್ಣ ಸಹಕಾರ ನೀಡಿದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಲು ಕೆಆರ್‌ಪಿ ಪಕ್ಷ ಸಹಕರಿಸಲಿದೆ.
ಕಳೆದ ಹಲವು ದಿನಗಳಿಂದ ಬಿಜೆಪಿಯ ವರಿಷ್ಠರು ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಿದ್ದಾರೆ. ಚುನಾವಣಾ ಹೊಂದಾಣಿಕೆ ಬಗ್ಗೆ ಆಸಕ್ತಿ ಇದ್ದು ಬಿಜೆಪಿ ತಮ್ಮ ಮಾತೃಪಕ್ಷವಾಗಿದ್ದು ಚುನಾವಣಾ ಹೊಂದಾಣಿಕೆ ಮಾಡುವುದಾದರೆ ಬಿಜೆಪಿ ಜತೆ ಮಾತ್ರ ಮೋದಿಯವರು ಈ ದೇಶದ ಗೌರವ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದು ಅವರ ನೇತೃತ್ವದಲ್ಲಿ ಭಾರತ ಮತ್ತೊಮ್ಮೆ ವಿಶ್ವ ಗುರು ಆಗಬೇಕಿದೆ. ಆದ್ದರಿಂದ ವರಿಷ್ಠರ ಜತೆ ಮಾತುಕತೆ ನಡೆಸಲಾಗುತ್ತಿದೆ. ಇನ್ನೂ ಯಾವುದು ಪೂರ್ಣವಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಲೋಕಸಭಾ ಸ್ಥಾನಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದ್ದು ಅಗತ್ಯ ಬಿದ್ದರೆ ಎನ್‌ಡಿಎ ಜತೆ ಮೈತ್ರಿ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ಗಾಲಿ ಜನಾರ್ದನರೆಡ್ಡಿ ತಿಳಿಸಿದರು.