ನವದೆಹಲಿ: ಬೆಂಗಳೂರಿನ ಅಂಡರ್‌ವರ್ಲ್ಡ್ ಡಾನ್‌ಗಳ ಬಗ್ಗೆ ಕನ್ನಡದಲ್ಲಿ ಅದಾಗಲೇ ಹಲವು ಕೃತಿಗಳು ಪ್ರಕಟವಾಗಿವೆ. ಆದರೆ ಇದೀಗ ಇಂಗ್ಲಿಷ್‌ನಲ್ಲಿ ಒಂದು ಕೃತಿ ಬಿಡುಗಡೆಗೆ ಸಿದ್ಧವಾಗಿದೆ. ಭೈಯ್ನಾಸ್ ಆಫ್ ಬೆಂಗಳೂರು ಕೃತಿಯನ್ನು ಲೇಖಕಿ, ಪತ್ರಕರ್ತೆ ಜ್ಯೋತಿ ಶೆಲಾರ್ ರಚಿಸಿದ್ದು, ಪೆಂಗ್ವಿನ್ ರ್‍ಯಾಂಡಮ್ ಹೌಸ್ ಪ್ರಕಟಿಸಿದೆ.
ಕೊಡಿಗೇಹಳ್ಳಿ ಮುನೇಗೌಡ, ಮುತ್ತಪ್ಪ ರೈ, ಅಗ್ನಿ ಶ್ರೀಧರ್, ಆಯಿಲ್ ಕುಮಾರ, ಬೆಕ್ಕಿನ ಕಣ್ಣು ರಾಜೇಂದ್ರ ಮತ್ತು ತನ್ವೀರ್‌ಅಹ್ಮದ್ ಸೇರಿದಂತೆ ಹಲವರ ಬಗ್ಗೆ ವಿವರ ಹಾಗೂ ಅವರು ಹೇಗೆ ರೌಡಿ ಚಟುವಟಿಕೆಗಳನ್ನು ನಡೆಸಿದರು ಎಂಬ ಮಾಹಿತಿಯಿದೆ.
ತನ್ವೀರ್ ಅಹ್ಮದ್, ಅಮಿತಾಭ್ ಬಚ್ಚನ್ ಫ್ಯಾನ್ ಆಗಿದ್ದ. ಡಾನ್, ಮುಕದ್ದರ್ ಕಾ ಸಿಕಂದರ್, ತ್ರಿಶೂಲ್ ಹಾಗೂ ಮಿ. ನಟವರಲಾಲ್ ಸಿನಿಮಾಗಳನ್ನು ನೋಡಿ, ಅದರಲ್ಲಿರುವ ಹೊಡೆದಾಟದ ದೃಶ್ಯಗಳನ್ನು ಅನುಕರಿಸುತ್ತಿದ್ದ. ಅಮಿತಾಭ್ ಸಿನಿಮಾಗಳ ಸಿನಿಮಾ ಶೈಲಿಯಲ್ಲಿ ಹೊಡೆದಾಟ ನಡೆಸುತ್ತಿದ್ದ.
ನಾನು ಅಮಿತಾಭ್‌ನ ಅಭಿಮಾನಿ ಎಂದು ತನ್ನ ಸ್ನೇಹಿತರಿಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಆಗ ಗನ್ ಸಂಸ್ಕೃತಿ ಬೆಂಗಳೂರಿನಲ್ಲಿರಲಿಲ್ಲ. ಚಾಕು, ಚೂರಿ, ಮಚ್ಚು ಮತ್ತು ಲಾಂಗುಗಳೇ ಮೆರೆಯುತ್ತಿದ್ದವು. ಮಚ್ಚು ತಿರುಗಿಸುವುದನ್ನು ಅಮಿತಾಭ್ ಬಚ್ಚನ್ ಸಿನಿಮಾ ನೋಡಿ ಅನುಕರಿಸುತ್ತಿದ್ದ.
1984ರಲ್ಲಿ ಇಂಕಿಲಾಬ್ ಸಿನಿಮಾ ಬಿಡುಗಡೆಯಾದಾಗ ಅದನ್ನು ನೋಡಲೆಂದು ಶಿವಾಜಿನಗರದ ನಾಗಾ ಥಿಯೇಟರಿಗೆ ಹೋಗಿದ್ದ. ಆಗ ಟಿಕೆಟ್ ಪಡೆಯಲು ವಿಪರೀತ ಕ್ಯೂ ಇತ್ತು. ಕ್ಯೂ ಬಿಟ್ಟು ಮುಂದೆ ಹೋಗಿದ್ದಕ್ಕಾಗಿ ಹೊಡೆದಾಟವೇ ನಡೆದಿತ್ತು.
ಆಗ ವ್ಯಕ್ತಿಯೊಬ್ಬನ ತಲೆಗೆ ಹೊಡೆದ ತನ್ವೀರ್ ತಪ್ಪಿಸಿಕೊಂಡು, ತನ್ನ ಗುರು ಕೋಳಿ ಫಯಾಜ್ ಬಳಿ ಆಶ್ರಯ ಪಡೆದಿದ್ದ. ಈ ಘಟನೆಯಲ್ಲಿ ಮೊದಲ ಬಾರಿಗೆ ತನ್ವೀರ್ ಮೇಲೆ ಕೇಸ್ ದಾಖಲಾಗಿತ್ತು. ನಂತರ ಬೆಂಗಳೂರು ಬಿಟ್ಟು ಮುಂಬೈಗೆ ಹೋಗಿದ್ದ ತನ್ವೀರ್, ಸ್ವಲ್ಪ ವರ್ಷಗಳ ನಂತರ ವಾಪಸ್ ಬೆಂಗಳೂರಿಗೆ ಬಂದಿದ್ದ. ನ.15ರಂದು ಈ ಕೃತಿ ಬಿಡುಗಡೆಯಾಗಲಿದೆ.