Advertisement
ರಫೇಲ್ ವಿವಾದಕ್ಕೆ ಸಂಬಂಧಿಸಿ ಏ.10ರಂದು ಸುಪ್ರೀಂಕೋರ್ಟ್ ಸೋರಿಕೆಯಾದ ದಾಖಲೆಗಳನ್ನು ಪರಿಗಣಿಸಬಹುದು ಎಂದು ಹೇಳಿತ್ತು. ಆ ದಿನ ಅಮೇಠಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷರು ಹಾಲಿ ಸರ್ಕಾರ, ಪ್ರಧಾನಿ ವಿರುದ್ಧ ಗುರುತರ ಆರೋಪ ಮಾಡಿದ್ದರು. ಅದರ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯವಾದಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಮೊಕದ್ದಮೆ ಹೂಡಿದ್ದರು. ಅದನ್ನು ಪರಿಶೀಲಿಸಿದ್ದ ಸುಪ್ರೀಂಕೋರ್ಟ್ ವಿವರಣೆ ನೀಡುವಂತೆ ಆದೇಶ ನೀಡಿತ್ತು. ಚುನಾವಣೆಯ ಪ್ರಚಾರದ ರಭಸದಲ್ಲಿ ಅಂಥ ಹೇಳಿಕೆ ನೀಡಿದ್ದೆ. ನ್ಯಾಯಾಂಗದ ಮೇಲೆ ಗೌರವ ಇದೆ ಎಂದು ಅಫಿಡಟವಿಟ್‌ಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.
Related Articles
Advertisement
ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರು ಮತ್ತು ನಾಯಕರು ವಿವಾದಿತ ಹೇಳಿಕೆ ನೀಡಿದ ಬಳಿಕ ಮಾಧ್ಯಮಗಳು ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಪಾರಾಗುವ ಹೇಳಿಕೆ ನೀಡುತ್ತಾರೆ. ನೇರ ಪ್ರಸಾರದ ಈ ದಿನಗಳಲ್ಲಿ ತಪ್ಪಾಗಿ ತಿಳಿದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಗ್ರಾಮದಿಂದ ವಿಶ್ವಾದ್ಯಂತ ಒಂದು ಘಟನೆಯ ಬಗ್ಗೆ ಮಾಹಿತಿ ರವಾನೆಯಾಗುವ ದಿನಮಾನದಲ್ಲಿ ಇರುವಾಗ ರಾಜಕೀಯ ವಿರೋಧಿಗಳು ನನ್ನ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳುವುದೇ ಪ್ರಶ್ನಾರ್ಹ.
ಹಾಲಿ ಚುನಾವಣೆಯಲ್ಲಿ ಯೋಧರ ವಿಚಾರ, ಧರ್ಮ ಸೂಕ್ಷ್ಮ ವಿಚಾರಗಳನ್ನು ಪ್ರಚಾರದ ಅವಧಿಯಲ್ಲಿ ಉಲ್ಲೇಖೀಸಬಾರದು ಎಂದು ಆದೇಶ ನೀಡಿತ್ತು. ಆದರೆ ಅದು ಯಾವುದೂ ಪಾಲನೆಯಾಗುತ್ತಿಲ್ಲ. ಅದಕ್ಕೆ ಕಾರಣವೇನೆಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ವ್ಯವಸ್ಥೆಯಲ್ಲಿನ ಅಡ್ಡಿ ಎದುರಾಗುತ್ತಿದೆ. ಕರ್ತವ್ಯನಿಷ್ಠ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನಿಯಮ ಪಾಲನೆ ಮಾಡುವುದಿದ್ದರೆ ಹಲವು ರೀತಿಯ ಅಡ್ಡಿಗಳನ್ನು ಅವರಿಗೆ ಒಡ್ಡಲಾಗುತ್ತದೆ. ನೈತಿಕ ಸ್ಥೈರ್ಯಕ್ಕೆ ಪ್ರಶ್ನೆ ಮಾಡುವ ವಿಚಾರ ಬಂದಾಗ ಯಾವುದೇ ಹಂತದ ಆದೇಶ ಇದ್ದರೂ, ಅದನ್ನು ಪಾಲಿಸಲು ಅಧಿಕಾರಿ ವರ್ಗ ಹಿಂದೇಟು ಹಾಕುತ್ತದೆ.
ಹೀಗಾಗಿ, ರಾಜಕೀಯ ಮುಖಂಡರು, ಸಾಮಾಜಿಕವಾಗಿ ಜನಪ್ರಿಯತೆ ಹೊಂದಿರುವವರು ಚುನಾವಣೆಯಂಥ ಸಂದರ್ಭಗಳಲ್ಲಿ ಎಲ್ಲೆ ಮೀರಿ ಮಾತನಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ನ್ಯಾಯಾಂಗ ಕೈಗೊಳ್ಳುವ ಕ್ರಮವನ್ನು ಮೆಚ್ಚಲೇಬೇಕಾಗುತ್ತದೆ. ದೇಶದಲ್ಲಿ ಇನ್ನೂ ನಾಲ್ಕು ಹಂತಗಳ ಚುನಾವಣೆ ಬಾಕಿ ಉಳಿದಿವೆ. ಹೀಗಾಗಿ, ಪಕ್ಷಭೇದವಿಲ್ಲದೆ ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್ ಅಧ್ಯಕ್ಷರು ಸಲ್ಲಿಸಿದ ಅಫಿಡವಿಟ್ ತಮಗೂ ಎಚ್ಚರಿಕೆ ಎಂದು ಪರಿಗಣಿಸಿದರೆ ಸುಲಲಿತ ಚುನಾವಣೆಗೆ ಮಾರ್ಗದರ್ಶಿಯಾದೀತು. ಈ ನಿಟ್ಟಿನಲ್ಲಿ ಸೋಮವಾರದ ಬೆಳವಣಿಗೆಯನ್ನು ಮಾದರಿಯಾಗಿ ಪರಿಗಣಿಸಬೇಕು.