ಚಾಮರಾಜನಗರ: ರಕ್ತದ ಆಮ್ಲಜನಕ ಮಟ್ಟ ಕಡಿಮೆಯಾಗಿ ಉಸಿರಾಟದ ತೊಂದರೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಯುವಕನಿಗೆ ಬೆಡ್ ದೊರಕದೇ ಮೃತಪಟ್ಟ ಘಟನೆ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಇದರಿಂದ ರೊಚ್ಚಿಗೆದ್ದ ಯುವಕನ ಕಡೆಯವರು ಜಿಲ್ಲಾಸ್ಪತ್ರೆಯ ಕಿಟಕಿ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದ ಅಂಬೇಡ್ಕರ್ ಬಡಾವಣೆಯ ನಿವಾಸಿ ಅಭಿಷೇಕ್ (25) ಮೃತ ಯುವಕ.
ಕಳೆದ ಆರು ದಿನದ ಹಿಂದೆಯೇ ಯುವಕನಿಗೆ ಸೋಂಕು ಧೃಢಪಟ್ಟಿತ್ತು. ಹೋಂ ಐಸೋಲೇಷನ್ ನಲ್ಲಿದ್ದರು. ಉಸಿರಾಟದ ಸಮಸ್ಯೆ ಹಿನ್ನಲೆ ಅಭಿಷೇಕ್ ನನ್ನ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯಲ್ಲಿ ಬೆಡ್ ಖಾಲಿಯಿರಲಿಲ್ಲ. ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕೆಂದು ಮೃತನ ಮನೆಯವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಯುವಕ ಮೃತಪಟ್ಟಿದ್ದಾನೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡಿದ್ದರೆ ಯುವಕ ಬದುಕುತ್ತಿದ್ದ. ವೈದ್ಯರ ನಿರ್ಲಕ್ಷ್ಯ ದಿಂದ ಮೃತಪಟ್ಟಿದ್ದಾನೆ ಎಂದು ಆಕ್ರೋಶಗೊಂಡು ಮೃತನ ಕಡೆಯವರು ಆಸ್ಪತ್ರೆಯ ಕಿಟಕಿ ಗಾಜು ಒಡೆದು ಹಾಕಿದರು. ಮೃತನ ಸ್ನೇಹಿತರು ಆಸ್ಪತ್ರೆಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಎಎಸ್ಪಿ ಅನಿತಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 155 ಬೆಡ್ ಗಳಿದ್ದು ಎಲ್ಲ ಬೆಡ್ ಗಳೂ ಭರ್ತಿಯಾಗಿ ಮತ್ತೆ ಹೆಚ್ಚುವರಿಯಾಗಿ 13.ಬೆಡ್ ಗಳನ್ನು ಹೊಂದಿಸಲಾಗಿದೆ. ಅವೂ ಸಹ ಭರ್ತಿ ಯಾಗಿದ್ದು ಹೊಸದಾಗಿ ಬಂದ ರೋಗಿಗಳಿಗೆ ಬೆಡ್ ದೊರಕುತ್ತಿಲ್ಲ. ಹೀಗಾಗಿ ಕೋವಿಡ್ ಚಿಕಿತ್ಸೆಗೆ ಬಂದ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರಕುವುದು ಕಷ್ಟವಾಗಿದೆ.