ವೆಲ್ಲಿಂಗ್ಟನ್: ಹ್ಯಾಮಿಲ್ಟನ್ ಪಂದ್ಯದಂತೆ ಮತ್ತೊಂದು ಸೂಪರ್ ಓವರ್ ಪಂದ್ಯಕ್ಕೆ ವೆಲ್ಲಿಂಗ್ಟನ್ ಮೈದಾನ ಸಾಕ್ಷಿಯಾಗಿದೆ. ಅಂತಿಮವಾಗಿ ಭಾರತ ಗೆದ್ದು ಬೀಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಆರಂಭಿಕ ಆಘಾತದ ನಂತರವೂ 165 ರನ್ ಗಳಿಸಿತು. ಕನ್ನಡಿಗ ಮನೀಶ್ ಪಾಂಡೆ 50 ರನ್ ಗಳಿಸಿ ತಂಡವನ್ನು ಆಧರಿಸಿದರು.
ಗುರಿ ಬೆನ್ನತ್ತಿದ ಕಿವೀಸ್ ಆರಂಭದಲ್ಲಿ ಸುಲಭ ಗೆಲುವನ್ನು ದಾಖಲಿಸುವ ನಿರೀಕ್ಷೆಯಲ್ಲಿತ್ತು. ಕಾಲಿನ್ ಮನಸ್ರೋ ಮತ್ತು ಟಿಮ್ ಸಿಫರ್ಟ್ ಅರ್ಧ ಶತಕ ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿತ್ತರು. ಅದರೆ ಅಂತಿಮವಾಗಿ ಸೈನಿ ಮತ್ತು ಶಾರ್ದೂಲ್ ಠಾಕೂರ್ ಕರಾರುವಕ್ ದಾಳಿಗೆ ನಲುಗಿದ ಕಿವೀಸ್ ಸತತ ವಿಕೆಟ್ ಕಳೆದುಕೊಂಡಿತು. ಅಂತಿಮ ಎಸೆತದಲ್ಲಿ ಎರಡು ರನ್ ಕದಿಯುವ ಸವಾಲು ಪಡೆದ ಸ್ಯಾಂಟ್ನರ್ ಒಂದು ರನ್ ತೆಗೆದು ಮತ್ತೊಂದು ರನ್ ಓಡುವಾಗ ರನ್ ಔಟ್ ಆದರು. ಅಲ್ಲಿಗೆ ಪಂದ್ಯಕ್ಕೆ ಟೈ ಮುದ್ರೆ ಒತ್ತಿತು.
ಮತ್ತೆ ಸೂಪರ್ ಓವರ್
ಕಿವೀಸ್ ಪರ ಸೂಪರ್ ಓವರ್ ಆಡಲು ಆಗಮಿಸಿದ್ದು ಕಾಲಿನ್ ಮನ್ರೋ ಮತ್ತು ಸೀಫರ್ಟ್. ಎಂಟು ರನ್ ಗಳಿಸಿದ್ದ ವೇಳೆ ಸೀಫರ್ಟ್ ಔಟ್. ಅಂತಿಮವಾಗಿ ಮಸ್ರೋ ನಾಲ್ಕು ರನ್ ಬಾರಿಸಿದರು. ಅಂತಿಮವಾಗಿ ಭಾರತಕ್ಕೆ ಜಯದ ಗುರಿ 13 ರನ್.
ಸೂಪರ್ ಓವರ್ ಅಡಲು ಭಾರತದ ಪರ ಬ್ಯಾಟಿಂಗ್ ಗೆ ಆಗಮಿಸಿದ್ದು ಕೆ ಎಲ್ ರಾಹುಲ್ ಮತ್ತೆ ವಿರಾಟ್ ಕೊಹ್ಲಿ. ಕಿವೀಸ್ ಪರ ಬೌಲರ್ ನಾಯಕ ಸೌಥಿ. ಗುರಿ 14 ರನ್. ಮೊದಲ ಎಸೆತದಲ್ಲಿ ರಾಹುಲ್ ಭರ್ಜರಿ ಸಿಕ್ಸರ್. ಎರಡನೇ ಎಸೆತದಲ್ಲಿ ಬೌಂಡರಿ. ಮೂರನೇ ಎಸೆತಕ್ಕೆ ರಾಹುಲ್ ಔಟ್. ಬ್ಯಾಟಿಂಗ್ ಗೆ ಆಗಮಿಸಿದ್ದು ಸಂಜು ಸ್ಯಾಮ್ಸನ್. ಮೂರು ಎಸೆತದಲ್ಲಿ ನಾಲ್ಕು ರನ್ ಗುರಿ.
ನಾಲ್ಕನೇ ಎಸೆತದಲ್ಲಿ ಜಾಣ್ಮೆ ಪ್ರದರ್ಶಿಸಿದ ಕೊಹ್ಲಿ ಎರಡು ರನ್ ಕಸಿದರು. ಐದನೇ ಎಸೆತವನ್ನು ಬೌಂಡರಿಗಟ್ಟಿದ ಕೊಹ್ಲಿ ಮತ್ತೊಂದು ಸೂಪರ್ ವಿಜಯಕ್ಕೆ ಕಾರಣರಾದರು.