ಬೆಂಗಳೂರು: ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಗೆ ಕಾಟನ್‌ಪೇಟೆ ಮತ್ತು ಚಾಮರಾಜಪೇಟೆ ಪೊಲೀಸರು ಗುಂಡೇಟಿನ ಉತ್ತರ ನೀಡಿದ್ದಾರೆ.
ಕಾಟನ್‌ಪೇಟೆ ಠಾಣೆ ರೌಡಿಶೀಟರ್ ರೂಪೇಶ್ ಅಲಿಯಾಸ್ ನಿರ್ಮಲ್ (35) ಬಂಧಿತ ಆರೋಪಿ. ಈ ತ ಹಲ್ಲೆ ನಡೆಸಿದ್ದರಿಂದ ಪೇದೆಗಳಾದ ಅಬ್ದುಲ್ ರಿಜ್ವಾನ್ ಮತ್ತು ಕುಮಾರ್ ಎಂಬುವವರ ಕೈ ಮತ್ತು ಹಣೆಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಪೇಗದೆಗಳು ಹಾಗೂ ಎಡಗಾಲಿಗೆ ಗುಂಡೇಟು ತಿಂದ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
2012ರಲ್ಲಿ ನಿರ್ಮಲ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಡಕಾಯಿತಿ, ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಕಾಟನ್‌ಪೇಟೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ಅಲ್ಲದೆ ಈತ ಮೂರುವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ವಾರಂಟ್ ಜಾರಿ ಮಾಡಿದರೂ ಹಾಜರಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಪಾರಿ ಕೊಲೆಗೆ ಸಂಚು: ರೌಡಿ ಅತುಶ್ ಎಂಬಾತ, ಕೆಲ ದಿನಗಳ ಹಿಂದೆ ತನ್ನ ಮನೆ ಮುಂದೆ ಹೇರ್ ಕಟಿಂಗ್ ಸಲೂನ್ ತೆರೆಯಲು ಮುಂದಾಗಿದ್ದ ವ್ಯಕ್ತಿಗೆ ಬೆದರಿಕೆ ಹಾಕಿದ್ದ. ಮನೆ ಮುಂದೆ ಸಲೂನ್ ತೆರೆದರೆ ಕೊಲೆ ಮಾಡುವುದಾಗಿ ಬೆದರಿಸಿ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡಿದ್ದ ಸಲೂನ್ ಮಾಲೀಕ, ಅತುಶ್‌ನನ್ನು ಕೊಲ್ಲುವಂತೆ ಎದುರಾಳಿ ಗುಂಪಿನ ರೂಪೇಶ್‌ಗೆ ಸುಪಾರಿ ಕೊಟ್ಟಿದ್ದ.
ಈ ಸಂಬಂಧ ನಿರ್ಮಲ್ ತನ್ನ ಮೂವರು ಸಹಚರರ ಜತೆ ಸೇರಿಕೊಂಡು ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ಕೊಲೆಗೆ ಸಂಚು ರೂಪಿಸಿದ್ದ. ಈ ಮಾಹಿತಿ ಪಡೆದು ಕಾಟನ್‌ಪೇಟೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತು ಚಾಮರಾಜಪೇಟೆ ಇನ್ಸ್‌ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ಮುಂಜಾನೆ 5 ಗಂಟೆ ಸುಮಾರಿಗೆ ಸ್ಮಶಾನಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲು ಮುಂದಾಗಿದೆ.
ಈ ವೇಳೆ ಇನ್ಸ್‌ಪೆಕ್ಟರ್ ಪ್ರಶಾಂತ್ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ. ಆದರೆ, ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಹಿಡಿಯಲು ಹೋದ ಪೇದೆಗಳಾದ ಅಬ್ದುಲ್ ರಿಜ್ವಾನ್ ಹಾಗೂ ಕುಮಾರ್ ಕೈ ಮತ್ತು ಹಣೆ ಭಾಗಕ್ಕೆ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ಆಗ ಕಾಟನ್‌ಪೇಟೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಆತ್ಮರಕ್ಷಣೆಗಾಗಿ ಎರಡು ಬಾರಿ ಗುಂಡು ಹಾರಿಸಿದ್ದು, ಆರೋಪಿ ನಿರ್ಮಲ್ ಎಡಗಾಲಿಗೆ ಗುಂಡು ತಗುಲಿ ಕುಸಿದು ಬಿದಿದ್ದಾನೆ. ಇನ್ನೂ ಮೂವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.