ಕೊಚ್ಚಿ: ಕೇರಳದ ಕೊಚ್ಚಿಯ ಎರಡು ಅನಧಿಕೃತ ಬಹುಮಹಡಿ ಕಟ್ಟಡಗಳು ಧರಾಶಾಯಿಗೊಳಿಸಿ 24 ಗಂಟೆಯೊಳಗೆ ಮತ್ತೆರಡು ಬಹುಮಹಡಿ ಕಟ್ಟಡವನ್ನು ಉರುಳಿಸಲಾಗಿದೆ.
ಮರಾಡು ಪ್ರದೇಶದಲ್ಲಿ ನಿಯಮಗಳನ್ನು ಮೀರಿ ನಿರ್ಮಿಸಿದ್ದ ನಾಲ್ಕು ಬಹುಮಹಡಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನಾಲ್ಕು ತಿಂಗಳ ಹಿಂದೆಯೇ ಸೂಚಿಸಿತ್ತು. ಅದರಂತೆ ಕೇರಳ ಸರಕಾರ ಸ್ಪೋಟಕಗಳನ್ನು ಬಳಸಿ ಶನಿವಾರ ಎರಡು ಕಟ್ಟಡಗಳನ್ನು ಉರುಳಿಸಿತ್ತು. ಉಳಿದ ಎರಡು ಕಟ್ಟಡಗಳನ್ನು ಇಂದು ಉರುಳಿಸಲಾಗಿದೆ.
ಕೊಚ್ಚಿ ಯ ಹೆಗ್ಗುರುತಾದ ವೆಂಬನಾಡ್ ಕೆರೆಗೆ ತೀರಾ ಸಮೀಪದಲ್ಲಿ ಈ ಕಟ್ಟಡಗಳನ್ನು ಕಟ್ಟಲಾಗಿದೆ. ಇದೇ ಕಾರಣಕ್ಕೆ ಕಟ್ಟಡಗಳನ್ನು ತೆರವುಗೊಳಿಸಲು ಕೋರ್ಟ್ ಆದೇಶಿಸಿತ್ತು. ಇದರಂತೆ ಶನಿವಾರ ಹೋಲಿ ಫೈತ್ ಮತ್ತು ಅಲ್ಫಾ ಸೆರೆನ್ ಕಟ್ಟಡಗಳನ್ನು ಧರಾಶಾಯಿಗೊಳಿಸಲಾಗಿತ್ತು. ಇಂದು ನಡೆದ ಕಾರ್ಯಾಚರಣೆಯಲ್ಲಿ ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಾಯರೋಲಮ್ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.
ಈ ನಾಲ್ಕು ಕಟ್ಟಡಗಳಲ್ಲಿ ವಾಸವಾಗಿದ್ದ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಗಳನ್ನು ಮಧ್ಯಂತರ ಪರಿಹಾರವಾಗಿ ನೀಡಲಾಗಿತ್ತು.
ವರದಿಯ ಪ್ರಕಾರ ಕೋರಲ್ ಕೋವ್ ಕಟ್ಟಡದಲ್ಲಿ 122 ವಸತಿ ಘಟಕಗಳು ಮತ್ತು ಗೋಲ್ಡನ್ ಕಾಯರೋಲಮ್ ಕಟ್ಟಡದಲ್ಲಿ 41 ವಸತಿ ಘಟಕಗಳಿದ್ದವು.