Advertisement

ಎನ್‌ಎಂಪಿಟಿಯಲ್ಲಿ ನಿರ್ಮಾಣಗೊಳ್ಳಲಿದೆ ಇನ್ನೊಂದು ಹೊಸ ಜೆಟ್ಟಿ

02:08 AM Oct 21, 2020 | mahesh |

ಮಂಗಳೂರು: ಕರಾವಳಿಯಲ್ಲಿ ಇನ್ನಷ್ಟು ಸರಕು ತುಂಬಿದ ಹಡಗುಗಳ ನಿರ್ವಹಣೆಯ ಉದ್ದೇಶದಿಂದ ನವಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿ) ಮತ್ತೂಂದು ನೂತನ ಜೆಟ್ಟಿ (ಬರ್ತ್‌) ನಿರ್ಮಾಣಕ್ಕೆ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿದೆ.

Advertisement

ಎನ್‌ಎಂಪಿಟಿಯಲ್ಲಿ ಸದ್ಯ 1ರಿಂದ 16 ಜೆಟ್ಟಿಗಳಿದ್ದು, ಮುಂದೆ 17ನೇ ಜೆಟ್ಟಿಯನ್ನು ಸಾಗರಮಾಲಾ ಯೋಜನೆಯಲ್ಲಿ 150 ಕೋ.ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಎನ್‌ಎಂಪಿಟಿ ಹಾಗೂ ಉದ್ದಿಮೆದಾರರ ಪ್ರಸ್ತಾವನೆಯ ಮೇರೆಗೆ ಹೊಸ ಜೆಟ್ಟಿ ಅನುಷ್ಠಾನವಾಗಲಿದೆ.

ಎನ್‌ಎಂಪಿಟಿಯ ಕುದುರೆ ಮುಖ ಜೆಟ್ಟಿಯ ಸಮೀಪ ನೂತನ ಜೆಟ್ಟಿ ನಿರ್ಮಾಣವಾಗುವ ನಿರೀಕ್ಷೆ ಯಿದೆ. ಇದಕ್ಕಾಗಿ ಸುಮಾರು 14 ಮೀ. ಆಳ ಡ್ರೆಜ್ಜಿಂಗ್‌ ಮಾಡಬೇಕಾ ಗಿದೆ. ಜತೆಗೆ ಸಾಮಗ್ರಿಗಳ ನಿರ್ವಹಣೆಗಾಗಿ ಕಾಂಕ್ರೀಟ್‌ ಜೆಟ್ಟಿ ಬೇಕಿದೆ. ಹೊಸ ಜೆಟ್ಟಿ ಆದ ಬಳಿಕ ಇದರಲ್ಲಿ ಕಬ್ಬಿಣದ ಅದಿರು ನಿರ್ವಹಿ ಸುವ ಹಡಗು ನಿಲುಗಡೆಗೆ ಅವಕಾಶ ದೊರೆಯುವ ಸಾಧ್ಯತೆಯಿದೆ.

ಎಂಆರ್‌ಪಿಎಲ್‌, ಎಂಸಿಎಫ್‌, ಕುದುರೆಮುಖ, ಬಿಎಎಸ್‌ಎಫ್‌, ಎಚ್‌ಪಿಸಿಎಲ್‌, ಪಡುಬಿದ್ರಿಯ ಅದಾನಿ ಸಹಿತ ಹಲವಾರು ದೊಡ್ಡ, ಮಧ್ಯಮ, ಸಣ್ಣ ಕೈಗಾರಿಕೆಗಳಿಗೆ ಮೂಲ ನವಮಂಗಳೂರು ಬಂದರು. ಇಲ್ಲಿಂದಲೇ ಕಚ್ಚಾ ವಸ್ತುಗಳು ಆಮದು- ರಫ್ತು ಆಗುತ್ತವೆ. ಹೀಗಾಗಿ ಬೃಹತ್‌ ಪ್ರಮಾಣದ ಹಡಗುಗಳು ಸರಕುಗಳೊಂದಿಗೆ ಎನ್‌ಎಂಪಿಟಿಗೆ ಆಗಮಿಸುತ್ತವೆ. ಹಡಗುಗಳ ನಿಲುಗಡೆಗಾಗಿ ಸದ್ಯ ಎನ್‌ಎಂಪಿಟಿಯಲ್ಲಿ 1ರಿಂದ 16 ಪ್ರತ್ಯೇಕ ಜೆಟ್ಟಿಗಳಿವೆ. ಈ ಪೈಕಿ 1, 2, 3, 6, 7 ಹಾಗೂ 14ನೇ ಜೆಟ್ಟಿಯಲ್ಲಿ ಸಾಮಾನ್ಯ ಸರಕು ಆಗಮನ-ನಿರ್ಗಮನವಾಗುತ್ತದೆ. 4ನೇ ಜೆಟ್ಟಿಯಲ್ಲಿ ದ್ರವೀಕೃತ ಅಮೋನಿಯ, 5ರಲ್ಲಿ ಸಿಮೆಂಟ್‌, ಖಾದ್ಯ ತೈಲ, 8ರಲ್ಲಿ ಕಲ್ಲಿದ್ದಲು, ಕಬ್ಬಿಣದ ಅದಿರು, 9ರಲ್ಲಿ ಎಲ್‌ಪಿಜಿ, 10, 11ರಲ್ಲಿ ಕಚ್ಚಾ ತೈಲ, 12, 13ರಲ್ಲಿ ಪೆಟ್ರೋಲಿಯಂ ಉತ್ಪನ್ನ, ಎಲ್‌ಪಿಜಿ ನಿರ್ವಹಣೆ ಮಾಡಲಾಗುತ್ತದೆ.

ರಫ್ತು-ಆಮದು
ತೈಲೋತ್ಪನ್ನ, ಗ್ರಾನೈಟ್‌ ಶಿಲೆಗಳು, ಆಹಾರ ಧಾನ್ಯ, ಕಬ್ಬಿಣದ ಅದಿರಿನ ಉಂಡೆಗಳು, ಕಾರ್ಗೋಗಳು ಇಲ್ಲಿಂದ ರಫ್ತಾಗುತ್ತವೆ. ಎಂಆರ್‌ ಪಿಎಲ್‌ಗಾಗಿ ಕಚ್ಚಾತೈಲ, ಉಳಿದಂತೆ ಮರದ ದಿಮ್ಮಿಗಳು, ಕಾರ್ಗೊ ಪಾರ್ಸೆಲ್‌ಗ‌ಳು, ಘನೀಕೃತ ಪುಡಿಗಳು, ಸಿಮೆಂಟ್‌, ಕಲ್ಲಿದ್ದಲು, ರಸಗೊಬ್ಬರ, ಅಡುಗೆ ಎಣ್ಣೆ, ರಾಸಾಯನಿಕ ದ್ರವಗಳು ಮುಂತಾದ ಕಾರ್ಗೊ ರಫ್ತುಗಳು, ಕಬ್ಬಿಣ ಅದಿರಿನ ಉಂಡೆಗಳು, ಗ್ರಾನೈಟ್‌, ಮೈದಾ, ತೈಲೋತ್ಪನ್ನಗಳು, ಕಾಫಿ, ಸಂಸ್ಕರಿತ ಗೋಡಂಬಿ ಇತ್ಯಾದಿಗಳನ್ನು ಆಮದು ಮಾಡಲಾಗುತ್ತದೆ.

Advertisement

3 ಖಾಸಗಿ ಹಿಡಿತದಲ್ಲಿ !
ಎನ್‌ಎಂಪಿಟಿಯಲ್ಲಿರುವ 15ನೇ ಜೆಟ್ಟಿಯನ್ನು ಯುಪಿಸಿಎಲ್‌ ಪಡೆದಿರುವುದರಿಂದ ಸದ್ಯ ಇದನ್ನು ಅದಾನಿ ಸಂಸ್ಥೆ ನಿರ್ವಹಿಸುತ್ತಿದೆ. 16ನೇ ಜೆಟ್ಟಿಯನ್ನು ಇತ್ತೀಚೆಗೆ ಚೆಟ್ಟಿನಾಡ್‌ ಸಂಸ್ಥೆಗೆ ನೀಡಲಾಗಿದೆ. 14ನೇ ಜೆಟ್ಟಿಯನ್ನು ಜೆಎಸ್‌ಡಬ್ಲ್ಯೂ ಕಂಪೆನಿಗೆ ನೀಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಉಳಿದ ಜೆಟ್ಟಿಗಳನ್ನು ಎನ್‌ಎಂಪಿಟಿ ನಿರ್ವಹಿಸುತ್ತಿದೆ. ನವಮಂಗಳೂರು ಬಂದರಿನಲ್ಲಿ ಇನ್ನೊಂದು ಹೊಸ ಜೆಟ್ಟಿ ನಿರ್ಮಾಣಕ್ಕೆ ಸಾಗರ ಮಾಲಾ ಯೋಜನೆಯಲ್ಲಿ ನಿರ್ಧರಿಸಲಾಗಿದೆ. ಈ ಮೂಲಕ ಎನ್‌ಎಂಪಿಟಿಯಲ್ಲಿ ಸರಕು ಆಮದು-ರಫ್ತು ಪ್ರಕ್ರಿಯೆಗಳಿಗೆ ಇನ್ನಷ್ಟು ಅವಕಾಶಗಳು ದೊರೆಯಲಿವೆ.
ನಳಿನ್‌ ಕುಮಾರ್‌ ಕಟೀಲು,ಸಂಸದರು, ದ.ಕ

Advertisement

Udayavani is now on Telegram. Click here to join our channel and stay updated with the latest news.

Next