ಮುಂಬಯಿಯಲ್ಲೇ ಹುಟ್ಟಿದ್ದರೂ ಸುಮಾರು 20 ತಮಿಳು ಮತ್ತು ಮಲಯಾಳ ಚಿತ್ರಗಳಲ್ಲಿ ನಟಿಸಿದ ಬಳಿಕ ನಾಯಕಿಯಾಗಿ ಬಾಲಿವುಡ್‌ಗೆ ಬರುತ್ತಿದ್ದಾಳೆ ಇಶಾ ತಲ್ವಾರ್. ಹೆಸರು ನೋಡಿ ಈಕೆ ವಿವಾದಗ್ರಸ್ತ ತಲ್ವಾರ್ ದಂಪತಿಯ ಸಂಬಂಧಿಕಳೇ ಎಂದು ಕೇಳಬೇಡಿ. ಆ ತಲ್ವಾರ್‌ಗಳಿಗೂ ಈ ಇಶಾ ತಲ್ವಾರ್‌ಗೂ ಯಾವ ಸಂಬಂಧವೂ ಇಲ್ಲ. ಸರ್‌ನೆಮ್ ಮಾತ್ರ ಒಂದೇ ಆಗಿದೆಯಷ್ಟೆ.
ಇಶಾ ತಲ್ವಾರ್ ಹುಟ್ಟಿ ಬೆಳೆದಿದ್ದೆಲ್ಲ ಮುಂಬಯಿಯಲ್ಲೇ. 17 ವರ್ಷಗಳ ಹಿಂದೆ ಹಮಾರ ದಿಲ್ ಆಪ್ ಕೆ ಪಾಸ್ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಇಶಾ ತಲ್ವಾರ್ ಪೂರ್ಣ ಪ್ರಮಾಣದ ನಾಯಕಿಯಾಗಿ ಆರಂಗೇಟ್ರಂ ಮಾಡಿದ್ದು ಮಲಯಾಳ ಚಿತ್ರದಲ್ಲಿ. ತಟ್ಟತ್ತಿನ್ ಮರಯೂತ್ತೆ ಅವಳು ನಾಯಕಿಯಾದ ಮೊದಲ ಚಿತ್ರ. ಮೊದಲ ಚಿತ್ರವೇ ಸೂಪರ್‌ಹಿಟ್ ಆದ ಕಾರಣ ಇಶಾ ದಕ್ಷಿಣದ ಚಿತ್ರರಂಗದಲ್ಲಿ ಭದ್ರವಾಗಿ ತಳವೂರಿದಳು.
ಪೃಥ್ವಿರಾಜ್, ಮಮ್ಮುಟ್ಟಿ , ದಿಲೀಪ್ ಸೇರಿದಂತೆ ಮಲಯಾಳ ಚಿತ್ರರಂಗದ ದಿಗ್ಗಜರಿಗೆ ನಾಯಕಿಯಾದ ಇಶಾ ತಮಿಳು, ತೆಲುಗು ಚಿತ್ರರಂಗಗಳಲ್ಲೂ ಸಾಕಷ್ಟು ಅವಕಾಶಗಳನ್ನು ಬಾಚಿದಳು. ಈ ನಡುವೆ ಹಲವು ಟಿವಿ ಸೀರಿಯಲ್‌ಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು. 50ಕ್ಕೂ ಅಧಿಕ ಜಾಹೀರಾತು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಅವಳದ್ದು. ಇಷ್ಟೆಲ್ಲ ಆದರೂ ಅವಳಿಗೆ ಬಾಲಿವುಡ್‌ಗೆ ಬರುವ ಭಾಗ್ಯ ಸಿಕ್ಕಿದ್ದು ಕಳೆದ ವರ್ಷ. ಸಲ್ಮಾನ್ ಖಾನ್‌ನ ಟ್ಯೂಬ್‌ಲೈಟ್ ಚಿತ್ರದಲ್ಲಿ ಚಿಕ್ಕದೊಂದು ಪಾತ್ರ ಸಿಕ್ಕಿದರೂ ಚಿತ್ರವೂ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ ಹಾಗೂ ಇಶಾ ಕೂಡ ಮಿಂಚಲಿಲ್ಲ. ಇದೀಗ ಕಾಲಾಕಾಂಡಿ ಎಂಬ ಚಿತ್ರದಲ್ಲಿ ಸೈಫ್ ಅಲಿಖಾನ್‌ಗೆ ಎದುರು ನಟಿಸುವ ಮೂಲಕ ಬಾಲಿವುಡ್‌ನಲ್ಲಿ ನಾಯಕಿಯಾಗುವ ಬಹುಕಾಲದ ಹಂಬಲವನ್ನು ಈಡೇರಿಸಿಕೊಂಡಿದ್ದಾಳೆ. ಈ ಆ್ಯಕ್ಷನ್ ಚಿತ್ರದಲ್ಲಿ ಅವಳು ಕೂಡ ಹಲವು ಮೈ ರೋಮಾಂಚನಗೊಳಿಸುವ ಸಾಹಸ ದೃಶ್ಯಗಳನ್ನು ಸ್ವತಹ ನಿಭಾಯಿಸಿದ್ದಾಳಂತೆ. ಸಿಮ್ಮಿಂಗ್‌ಪೂಲ್‌ನಲ್ಲಿ ಕಿಸ್ ಕೊಡುವಂತಹ ಮೈ ಬಿಸಿಯೇರಿಸುವ ದೃಶ್ಯಗಳಲ್ಲೂ ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಈ ದೃಶ್ಯಕ್ಕಾಗಿಯೇ ಆಕೆ ಡೈವಿಂಗ್ ಕಲಿತುಕೊಂಡಿದ್ದಾಳಂತೆ. ಕಾಲಾಕಾಂಡಿ ಟೀಸರ್ ನೋಡಿದವರು ಇಶಾ ತಲ್ವಾರ್‌ಗೆ ಬಾಲಿವುಡ್ ಹೀರೊಯಿನ್ ಆಗುವ ಎಲ್ಲ ಅರ್ಹತೆಗಳು ಇವೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪ್ರೇಕ್ಷಕರು ಮೆಚ್ಚಿದರೆ ಬಾಲಿವುಡ್‌ಗೆ ಇನ್ನೊಬ್ಬಳು ಇಶಾ ಸಿಕ್ಕಿದಂತೆಯೇ.