ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಸೋಮವಾರ ತಡರಾತ್ರಿ ಯಶವಂತಪುರ ವಾರ್ಡ್‌ನ ಎರಡು ಅಂತಸ್ತಿನ ಕಟ್ಟಡ ಕುಸಿದಿದ್ದು, ಘಟನೆಯಲ್ಲಿ ಅದೃಷ್ಟವಶಾತ್ ಮೂವರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ಯಶವಂತಪುರ ವಾರ್ಡ್‌ನ ಬಿ.ಕೆ. ನಗರದ ಸಾಯಿರಾಮ ಮಂದಿರ ಮುಂಭಾಗದಲ್ಲಿದ್ದ ಎರಡು ಅಂತಸ್ತಿನ ಕಟ್ಟಡದಲ್ಲಿ ರಾತ್ರಿ 9.30ರ ಸುಮಾರಿಗೆ ಕುಸಿತ ಕಂಡುಬಂದಿದೆ. ಇದನ್ನು ಗಮನಿಸಿದ ಅಕ್ಕ-ಪಕ್ಕದ ನಿವಾಸಿಗಳು ತಕ್ಷಣ ಆ ಮನೆಯಲ್ಲಿದ್ದ ಚಿನ್ನರಾಜು ಸೇರಿದಂತೆ ಮೂವರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟೊತ್ತಿಗೆ ಕಟ್ಟಡದ ನೆಲಮಹಡಿ ಸಂಪೂರ್ಣವಾಗಿ ಕುಸಿದು, ಎರಡನೇ ಮಹಡಿ ಪಕ್ಕದ ಕಟ್ಟಡಕ್ಕೆ ಒರಗಿಕೊಂಡಿತು.
ಮನೆ ಮಾಲೀಕನ ವಿರುದ್ಧ ದೂರು: ಈ ವೇಳೆಗೆ ಕುಸಿದ ಕಟ್ಟಡ ಸಮೀಪದಲ್ಲೇ ಯಶವಂತಪುರ ಸದಸ್ಯ ಜಿ.ಕೆ. ವೆಂಕಟೇಶ್ ಮನೆ ಇದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಮನೆಯಲ್ಲಿದ್ದ ಎರಡು ಸಿಲಿಂಡರ್‌ಗಳನ್ನು ಹೊರತೆಗೆದು ಎಚ್ಚರ ವಹಿಸಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದರು.
ಶಿಥಿಲಗೊಂಡ ಕಟ್ಟಡ ಬಾಡಿಗೆ ನೀಡಿದ ಮನೆ ಮಾಲೀಕರ ವಿರುದ್ಧ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ. 40 ವರ್ಷಗಳ ಕಟ್ಟಡವಾಗಿದ್ದರಿಂದ ಕುಸಿತವಾಗಿದೆ. ಅಲ್ಲದೇ ರಾಜಕಾಲುವೆಯ ತಡೆಗೋಡೆಗೆ ಆನಿಸಿ ಕಟ್ಟಡ ನಿರ್ಮಿಸಲಾಗಿದೆ ಹಾಗೂ ಕಳೆದ ಎರಡು ತಿಂಗಳಿಂದ ನಿರಂತ ರವಾಗಿ ಮಳೆ ಸುರಿಯು ತ್ತಿರುವುದರಿಂದ ಕಟ್ಟಡದ ಗೋಡೆಗಳು ಶಿಥಿಲಗೊಂಡು ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಶಿಥಿಲಗೊಂಡ ಕಟ್ಟಡಗಳ ತೆರವುಗೊಳಿಸಲು ನೋಟಿಸ್ ನೀಡುವ ಕಾರ್ಯವನ್ನು ಕೂಡಲೇ ಆರಂಭಿಸಲಾಗಿದೆ ಎಂದು ಜಂಟಿ ಆಯುಕ್ತ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಚಿನ್ನ ಮಣ್ಣುಪಾಲು: ಕಟ್ಟಡದಲ್ಲಿ ಬಾಡಿಗೆ ಇದ್ದ ಚಿನ್ನರಾಜು ಕುಟುಂಬ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ಚಿನ್ನರಾಜು ಅವರಿಗೆ ಮಗ ಮತ್ತು ಮಗಳು ಇದ್ದಾರೆ. ಕುಟುಂಬದ ಸದಸ್ಯರೆಲ್ಲ ದುಡಿದು ಖರೀದಿಸಿದ್ದ 23 ಗ್ರಾಂ ಚಿನ್ನ ಮಣ್ಣುಪಾಲಾಯಿತು ಎಂದು ಚಿನ್ನರಾಜು ಕಣ್ಣೀರಿಟ್ಟರು.