ಬಾಗಲಕೋಟೆ : ಹೆಣ್ಣು ಮಗು ಹುಟ್ಟಿದ್ದಕ್ಕೆ ಮನನೊಂದ ಬಾಣಂತಿಯೊಬ್ಬರು, ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ಬಾಣಂತಿ ಬದುಕುಳಿದಿದ್ದು, ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿವೆ.
ಆತ್ಮಹತ್ಯೆಗೆ ಯತ್ನಿಸಿದ ಬಾಣಂತಿಯನ್ನು ಸಂಗೀತಾ ಗುಡೆಪ್ಪನವರ (28) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ 6 ವರ್ಷದ ಶ್ರೀಶೈಲ, 4 ವರ್ಷದ ಶ್ರಾವಣಿ ಹಾಗೂ 21 ದಿನಗಳ ಹೆಣ್ಣು ಶಿಶು ಸೌಜನ್ಯ ಮೃತಪಟ್ಟಿವೆ.
ಸಂಗೀತಾ ಅವರನ್ನು ತಮ್ಮೂರಿನಲ್ಲೇ ಮದುವೆ ಮಾಡಿಕೊಟ್ಟಿದ್ದು, ಮೂವರು ಮಕ್ಕಳಾಗಿವೆ. ಮೊದಲ ಮಗು ಗಂಡು ಜನಿಸಿದ್ದು, ಬಳಿಕ ಎರಡು ಮಕ್ಕಳೂ ಹೆಣ್ಣು ಹುಟ್ಟಿದ್ದವು. ಕಳೆದ 21 ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಶುಕ್ರವಾರ ಸಂಜೆ ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮನೆಯ ಪಕ್ಕವೇ ಇದ್ದ ಬಾವಿಯಲ್ಲಿ ಸದ್ದು ಬಂದ ತಕ್ಷಣ, ಬಾಣಂತಿ ಸಂಗೀತಾಳ ತಂದೆ ಧಾವಿಸಿ ಬಂದು ಕಾಪಾಡಲು ಪ್ರಯತ್ನಿಸಿದ್ದಾರೆ. ಬಾಣಂತಿಯನ್ನು ಕಾಪಾಡಿದ್ದು, ಮೂವರು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಜಯಪ್ರಕಾಶ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಮಹೇಶ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.