Advertisement

ಶಕ್ತಿಕೇಂದ್ರದ ಹೆಸರಲ್ಲಿ ಮತ್ತೊಂದು ವಂಚನೆ

06:36 AM Mar 05, 2019 | Team Udayavani |

ಬೆಂಗಳೂರು: ವಿಧಾನಸೌಧದ ಕೊಠಡಿಯನ್ನು ದುರ್ಬಳಕೆ ಮಾಡಿಕೊಂಡು ತಮಿಳುನಾಡು ಮೂಲದ ಗೋಡಂಬಿ ವ್ಯಾಪಾರಿಗೆ ಒಂದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಲು ಟೆಂಡರ್‌ ಕೊಡಿಸುವುದಾಗಿ ನಂಬಿಸಿದ ಒಂದೇ ಕುಟುಂಬದ ನಾಲ್ವರು, ಸ್ಟುಡಿಯೋ ಮಾಲೀಕರೊಬ್ಬರಿಂದ ಎಂಟು ಲಕ್ಷ ರೂ. ಪಡೆದು ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಜಯನಗರ ನಿವಾಸಿ, ಸ್ಟುಡಿಯೋ ಮಾಲೀಕ ಎಂ.ಎನ್‌.ಭಾಸ್ಕರ್‌ ನಾಯ್ಕರ್‌ ಎಂಬವವರು ಅನುರಾಗ್‌, ಆತನ ತಂದೆ ರಾಜೇಶ್‌ ಮತ್ತು ಇತರರ ವಿರುದ್ಧ ಬನಶಂಕರಿ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ದೂರುದಾರ ಭಾಸ್ಕರ್‌ ನಾಯ್ಕರ್‌, ಜಯನಗರ 7ನೇ ಬ್ಲಾಕ್‌ನಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಡಿಸೆಂಬರ್‌ ಮೊದಲ ವಾರದಲ್ಲಿ ಸ್ಟುಡಿಯೋಗೆ ಬಂದ ಆರೋಪಿ ಅನುರಾಗ್‌, ಚಲನಚಿತ್ರ ಒಂದರ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದ. ಹೀಗಾಗಿ ಭಾಸ್ಕರ್‌ ನಾಯ್ಕರ್‌, ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಡೆದ ಸಿನಿಮಾ ಮುಹೂರ್ತದ ದೃಶ್ಯಗಳನ್ನು ಚಿತ್ರೀಕರಿಸಿ ಕೊಟ್ಟಿದ್ದರು.

ಕೆಲ ದಿನಗಳ ಬಳಿಕ ಸ್ಟುಡಿಯೋಗೆ ಬಂದ ಆರೋಪಿ ಅನುರಾಗ್‌, ನಮ್ಮ ತಂದೆ ರಾಜೇಶ್‌ ವಿಧಾನಸೌಧದಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಒಮ್ಮೆ ನಮ್ಮ ಮನೆಗೆ ಬಂದು ತಂದೆಯವರನ್ನು ಭೇಟಿ ಮಾಡಿ ಎಂದು ಒತ್ತಾಯಿಸಿದ್ದ. ಈ ಹಿನ್ನೆಲೆಯಲ್ಲಿ ಭಾಸ್ಕರ್‌ ನಾಯ್ಕರ್‌ ಆರೋಪಿಯ ಮನೆಗೆ ತೆರಳಿದ್ದರು.

ವಿಧಾನಸೌಧದಲ್ಲಿ ಶೂಟಿಂಗ್‌: ಭಾಸ್ಕರ್‌ ನಾಯ್ಕರ್‌ ಮನೆಗೆ ಹೋಗುತ್ತಿದ್ದಂತೆ ಆರೋಪಿ ಅನುರಾಗ್‌, ತನ್ನ ಕುಟುಂಬ ಸದಸ್ಯರನ್ನು ಪರಿಚಯಿಸಿಕೊಟ್ಟಿದ್ದಾನೆ. ಈ ವೇಳೆ ಅನುರಾಗ್‌ ತಂದೆ ರಾಜೇಶ್‌, ತಾನು ವಿಧಾನಸೌಧದಲ್ಲಿ ದೊಡ್ಡ ಹುದ್ದೆಯಲ್ಲಿದ್ದು, ತನಗೆ ಪ್ರತ್ಯೇಕ ಕೊಠಡಿ ಇದೆ. ಸರ್ಕಾರದ ಹಲವಾರು ಸಚಿವರ ಪರಿಚಯವಿದೆ.

Advertisement

ಸ್ಮಾರ್ಟ್‌ ಸಿಟಿ ಹಾಗೂ ವಿಧಾನಸೌಧ ಯೋಜನೆಗಳಿಗೆ ಮುಖ್ಯಸ್ಥನಾಗಿದ್ದೇನೆ. ತಮ್ಮ ಪುತ್ರನ ಸಿನಿಮಾದ ದೃಶ್ಯಗಳನ್ನು ಚೆನ್ನಾಗಿ ಸೆರೆ ಹಿಡಿದಿದ್ದೀರಿ. ಹೀಗಾಗಿ ತಾವು ಒಪ್ಪಿದರೆ, ವಿಧಾನಸೌಧದಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಲು ಟೆಂಡರ್‌ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ.

8.12 ಲಕ್ಷ ರೂ. ವಂಚನೆ: ಶೂಟಿಂಗ್‌ ಟೆಂಡರ್‌ ಪಡೆಯಲು ನೋಂದಣಿ ಶುಲ್ಕ ಹಾಗೂ ಒಪ್ಪಂದ ಶುಲ್ಕವಾಗಿ ಹಣ ಪಾವತಿ ಮಾಡಬೇಕು ಎಂದು ಭಾಸ್ಕರ್‌ರಿಂದ ಹಲವು ಹಂತಗಳಲ್ಲಿ 8.12 ಲಕ್ಷ ರೂ. ಹಣವನ್ನು ಆರೋಪಿಗಳು ಪಡೆದುಕೊಂಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಟೆಂಡರ್‌ ಕೊಡಿಸದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಸಾಲ ಮಾಡಿ ಹಣ ಕೊಟ್ಟರು: ಈ ಕುರಿತು ಪ್ರತಿಕ್ರಿಯೆ ನೀಡಿದ ದೂರುದಾರ ಭಾಸ್ಕರ್‌ ನಾಯ್ಕರ್‌ ಅವರ ಪತ್ನಿ ಸುನೀತಾ ಭಾಸ್ಕರ್‌, “ಅನುರಾಗ್‌ ಹಾಗೂ ಆತನ ತಂದೆ, ತಾಯಿ ಮತ್ತು ಸಹೋದರಿ ವಿಧಾನಸೌಧದಲ್ಲಿ ಶೂಟಿಂಗ್‌ ಮಾಡಲು ಟೆಂಡರ್‌ ಕೊಡಿಸುವುದಾಗಿ ನಂಬಿಸಿ ನನ್ನ ಪತಿಯಿಂದ 8.12 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.

ರಾಜೇಶ್‌, ಸ್ಮಾಟ್‌ ಸಿಟಿ ಮತ್ತು ವಿಧಾನಸೌಧ ಯೋಜನೆಗೆ ಮುಖ್ಯಸ್ಥನಾಗಿದ್ದು, ದೊಡ್ಡ ಮೊತ್ತದ ಟೆಂಡರ್‌ ಕೊಡಿಸುತ್ತೇನೆ. ಪ್ರತಿ 40 ದಿನಕ್ಕೆ 60 ಲಕ್ಷ ರೂ. ಮೊತ್ತದ ಯೋಜನೆ ಇದಾಗಿದ್ದು, ಇಂತಿಷ್ಟು ಹಣ ಕೊಡಬೇಕು ಎಂದು ರಾಜೇಶ್‌ ನಂಬಿಸಿದ್ದ. ಕೋಟಿ ಮೊತ್ತದ ಯೋಜನೆಯಾದರಿಂದ ಸ್ನೇಹಿತರ ಬಳಿ ಸಾಲ ಮಾಡಿ 8.12 ಲಕ್ಷ ರೂ. ಹಣವನ್ನು ಆರ್‌ಟಿಜಿಎಸ್‌ ಮೂಲಕ ವರ್ಗಾವಣೆ ಮಾಡಲಾಗಿತ್ತು’ ಎಂದು ಹೇಳಿದ್ದಾರೆ.

ನಮಗೇ ಲಾಯರ್‌ ನೋಟಿಸ್‌: “ಕೆಲ ದಿನಗಳು ಕಳೆದರೂ ಟೆಂಡರ್‌ ಬಗ್ಗೆ ಮಾಹಿತಿ ಬರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ದೆಹಲಿಯಿಂದ ಪತ್ರ ಬರುವುದಾಗಿ ರಾಜೇಶ್‌ ಸಬೂಬು ಹೇಳುತ್ತಿದ್ದ. ನಂತರ ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ ಕೂಡಲೇ ಅಷ್ಟು ಹಣ ವಾಪಸ್‌ ಕೊಡುವಂತೆ ಒತ್ತಾಯಿಸಿದೆವು.

ಆದರೆ ಅವರು ನಮಗೇ ವಕೀಲರ ಮೂಲಕ ನೋಟಿಸ್‌ ಕಳುಹಿಸಿದ್ದರು. ಅಲ್ಲದೆ, ಅಪರಿಚಿತ ವ್ಯಕ್ತಿಯಿಂದ ಕರೆ ಮಾಡಿಸಿ, ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆ ಕೂಡ ಹಾಕಿದ್ದರು. ಈ ಕುರಿತಂತೆ ಆರೋಪಿ ರಾಜೇಶ್‌ ಕುಟುಂಬದ ನಾಲ್ವರ ವಿರುದ್ಧ ಪತಿ ಭಾಸ್ಕರ್‌ ನಾಯ್ಕರ್‌ ಪ್ರಕರಣ ದಾಖಲಿಸಿದ್ದಾರೆ,’ ಎಂದು ಸುನೀತಾ ಭಾಸ್ಕರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next