“ಟ್ರಂಕ್’ ಎಂಬ ಹಾರರ್ ಚಿತ್ರ ನಿರ್ದೇಶಿಸಿದ್ದ ರಿಷಿಕಾ ಶರ್ಮ ಈಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. ಈ ಬಾರಿ ಅವರು ಉತ್ತರ ಕರ್ನಾಟಕದತ್ತ ಚಿತ್ತ ಹರಿಸಿದ್ದಾರೆ. ಇಡೀ ಚಿತ್ರ ಆ ಭಾಗದ ಕಥೆ ಆವರಿಸಿರುವುದರಿಂದ, ಅದೇ ಭಾಷೆಯಲ್ಲೇ ಚಿತ್ರ ಮೂಡಿಬರಲಿದೆ. ಅದೊಂದು ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳ ಚಿತ್ರ ಎಂಬುದು ನಿರ್ದೇಶಕಿ ರಿಷಿಕಾ ಶರ್ಮ ಮಾತು. ಅಂದಹಾಗೆ, ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ.
ಈ ಚಿತ್ರದಲ್ಲಿ ಅರುಣ ಬಾಲರಾಜ್ ಮತ್ತು ‘ಟ್ರಂಕ್’ ಚಿತ್ರದಲ್ಲ ನಟಿಸಿದ್ದ ನಿಹಾಲ್ ಅವರೇ ನಟಿಸುತ್ತಿದ್ದಾರೆ. ಉಳಿದಂತೆ ಬಹುತೇಕ ಉತ್ತರ ಕರ್ನಾಟಕ ಭಾಗದ ರಂಗಭೂಮಿ ಕಲಾವಿದರನ್ನೇ ಇಟ್ಟುಕೊಂಡು ಚಿತ್ರ ಮಾಡಲು ತಯಾರಿ ನಡೆಸುತ್ತಿದ್ದಾರೆ ರಿಷಿಕಾ ಶರ್ಮ. ಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ರಿಷಿಕಾ ಶರ್ಮ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಆ ಭಾಗದ ಮಂದಿ ಬಳಿ ಮಾಡಿಸಿಕೊಳ್ಳುವ ಯೋಚನೆ ಅವರದು.
ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಮುಗಿಯುವ ಹಂತದಲ್ಲಿದ್ದು, ಈಗ ಕೋರ್ಟ್ ಮತ್ತು ಪೊಲೀಸ್ ಸ್ಟೇಷನ್ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಅವರು ಸಣ್ಣ ರೀಸರ್ಚ್ ಮಾಡಲಿದ್ದಾರಂತೆ. ಉತ್ತರ ಕರ್ನಾಟಕ ಭಾಗದ ಕಥೆ ಮಾಡುತ್ತಿರುವುದರಿಂದ ಅಲ್ಲಿನ ಜನರ ಬದುಕು, ಬವಣೆ ಇತ್ಯಾದಿ ಅಂಶಗಳು ಚಿತ್ರದಲ್ಲಿರಲಿವೆ. “ಟ್ರಂಕ್’ ಚಿತ್ರ ವೀಕ್ಷಿಸಿದ ಮೂವರು ನಿರ್ಮಾಪಕರು, ಚಿತ್ರತಂಡದ ಕೆಲಸ ಮೆಚ್ಚಿಕೊಂಡು,
ಸಿನಿಮಾ ಮಾಡಿಕೊಡುವಂತೆ ಕೇಳಿಕೊಂಡಿದ್ದರಿಂದ, ಚಿತ್ರಕ್ಕೆ ತಯಾರಿ ನಡೆಯುತ್ತಿದೆ ಎನ್ನುವ ರಿಷಿಕಾ ಶರ್ಮ, ದಸರಾ ಹಬ್ಬದ ಬಳಿಕ ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾಬಳಗದ ಆಯ್ಕೆ ಕುರಿತು ಮಾಹಿತಿ ಕೊಡುವುದಾಗಿ ಹೇಳುತ್ತಾರೆ. ಬಹುತೇಕ “ಟ್ರಂಕ್’ ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಎರಡು ಕಡೆ ಚಿತ್ರೀಕರಣ ನಡೆಯಲಿದೆ.