ಲಕ್ನೋ : ಉತ್ತರ ಪದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಆಡಳಿದ ಚುಕ್ಕಣಿ ಹಿಡಿದ ಬಳಿಕ ರಾಜ್ಯದಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳವರ ಮೇಲೆ ಸರ್ಕಾರ ಮತ್ತು ಪೋಲಿಸ್ ಹದ್ದಿನ ಕಣ್ಣಿಟ್ಟಿದೆ. ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ಎನ್‌ಕೌಂಟರ್ ಮಾಡಿದ ಸುದ್ದಿಗಳು ಉತ್ತರ ಪ್ರದೇಶದಿಂದ ಆಗಾಗ ಕೇಳಿಬರುತ್ತಿರುವುದೂ ಸರ್ವೇ ಸಾಮಾನ್ಯವಾಗಿದೆ.
ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಕ್ರಿಮಿನಲ್‌ನನ್ನು ಪೋಲಿಸರು ಎನ್‌ಕೌಂಟರ್ ಮಾಡಿ ಹೊಡೆದುರುಳಿಸಿದ್ದಾರೆ. ಆದಿತ್ಯ ರಾಣಾ ಎಂಬ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಎನ್‌ಕೌಂಟರ್ ಮಾಡಲಾಗಿದೆ. ಈತನನ್ನು ಪತ್ತೆ ಹಚ್ಚಿವರಿಗೆ 2.50 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿತ್ತು.
ʻಉತ್ತರ ಪ್ರದೇಶದ ಮೊಸ್ಟ್ ವಾಂಟೆಡ್, ನಟೋರಿಯಸ್ ಕ್ರಿಮಿನಲ್ ಆದಿತ್ಯ ರಾಣಾನನ್ನು ಬುಧವಾರ ಬೆಳಗ್ಗೆ ಬುಧನ್‌ಪುರ್ ಪೋಲಿಸ್ ಚೌಕಿ ಬಳಿ ಎನ್‌ಕೌಂಟರ್ ಮಾಡಲಾಗಿದೆ. ಈ ವೇಳೆ ಐವರು ಪೋಲಿಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆʼ ಎಂದು ಉತ್ತರ ಪ್ರದೇಶ ಪೋಲಿಸ್ ಅಧಿಕಾರಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅತಿ ದೊಡ್ಡ ಮಾಫಿಯಾ ಡಾನ್‌ಗಳಲ್ಲಿ ಒಬ್ಬನಾಗಿದ್ದ ಆದಿತ್ಯ ರಾಣಾ ಮೇಲೆ 43 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 6 ಕೊಲೆ, 13 ದರೋಡೆ ಪ್ರಕರಣಗಳಲ್ಲೂ ಆದಿತ್ಯ ರಾಣಾ ಆರೋಪಿಯಾಗಿದ್ದ.
2017 ಮತ್ತು 2022ರಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾಗ ಎರಡು ಬಾರಿಯೂ ಆತ ಪೋಲಿಸರಿಗೆ ಚಳ್ಳೇಹಣ್ಣು ತಿನ್ನಿಸಿ ಕಸ್ಟಡಿಯಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಆತನ ಗ್ಯಾಂಗ್‌ನಲ್ಲಿ ಸುಮಾರು 48 ಜನ ಸದಸ್ಯರಿದ್ದು 6 ಜನರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.