Advertisement
ವಾಣಿವಿಲಾಸ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಸರ್ಕಾರಿ ಆಸ್ಪತ್ರೆಯ “ಎದೆ ಹಾಲಿನ ಬ್ಯಾಂಕ್’ ಸ್ಥಾಪನೆ ನಿಗದಿಯಂತೆ ಕಳೆದ ತಿಂಗಳೇ ಆರಂಭವಾಗಬೇಕಿತ್ತು. ಆದರೆ, ಎದೆ ಹಾಲಿನ ಪರೀಕ್ಷೆ ನಡೆಸಲು “ಮಿಲ್ಕ್ ಅನಲೈಜರ್” ಯಂತ್ರೋಪಕರಣದ ಕೊರತೆಯಿಂದಾಗಿ ಇನ್ನೂ ಮೂರ್‍ನಾಲ್ಕು ತಿಂಗಳು ತಡವಾಗುವ ಲಕ್ಷಣಗಳು ಕಂಡು ಬರುತ್ತಿವೆ.
Related Articles
Advertisement
ಅದರಲ್ಲಿ ಬ್ಯಾಂಕ್ ಆರಂಭಕ್ಕೆ ಬೇಕಾದ ಪಾಶ್ಚರೀಕರಿಸಲು ಪ್ಯಾಶ್ಚರೈಸರ್ ಯಂತ್ರ, ಹಾಲು ಶೇಖರಣೆ ಮಾಡುವ ಡಿಫ್ರಿಜರ್ ಮತ್ತು ಫ್ರೀಜರ್, ಎದೆಹಾಲು ಸಂಗ್ರಹ ಬ್ರೆಸ್ಟ್ ಪಂಪ್ ಮತ್ತು ಬಾಟಲ್‌ಗಳು ಸೇರಿದಂತೆ 10 ಪರಿಕರಗಳಲ್ಲಿ ಒಟ್ಟು ಒಂಬತ್ತು ಪರಿಕರಣಗಳನ್ನು ಪೂರೈಸಿದೆ. ಆದರೆ, ಎದೆ ಹಾಲನ್ನು ವಿಂಗಡಿಸುವ ಮಿಲ್ಕ್ ಅನಲೈಜರ್ ಯಂತ್ರವನ್ನು ನೀಡಿಲ್ಲ. ಹೀಗಾಗಿ, ಬ್ಯಾಂಕ್ ಆರಂಭಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳುತ್ತಾರೆ.
ಟೆಂಡರ್ ಅಗತ್ಯ: ಬ್ಯಾಂಕ್ ಆರಂಭಕ್ಕೆ ಬಾಕಿ ಉಳಿದಿರುವ ಮಿಲ್ಕ್ ಅನಲೈಜರ್ ಯಂತ್ರವನ್ನು ಕೆಎಪಿಎಲ್ ನೀಡಿದ ಹಿನ್ನೆಲೆಯಲ್ಲಿ ಖರೀದಿಸಲು ಅನುಮತಿ ಕೋರಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧಿಕಾರಿಗಳಿಗೆ ಕಳೆದ ತಿಂಗಳು ಪತ್ರ ಬರೆಯಲಾಗಿದೆ. ಈಗ ಅಧಿಕಾರಿಗಳು ಆಸ್ಪತ್ರೆಯ ಅನುದಾನದಲ್ಲಿಯೇ ಯಂತ್ರವನ್ನು ಖರೀದಿಸಲು ಸೂಚನೆ ನೀಡಿದ್ದಾರೆ. ಸದ್ಯ ಟೆಂಡರ್ ಕರೆದರೂ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡೂವರೆ ತಿಂಗಳು ಬೇಕಾಗುತ್ತದೆ ಎಂದು ತಿಳಿಸುತ್ತಾರೆ.
ಎದೆಹಾಲಿನ ಬ್ಯಾಂಕ್ ಮುನ್ನಡೆಸಲು ತಜ್ಞ ವೈದ್ಯರು, ಸಿಬ್ಬಂದಿ ನೇಮಕ ಅವಶ್ಯಕ. ಆದರೆ, ಸರ್ಕಾರ ಹಾಗೂ ಇಲಾಖೆ ಮನವಿ ಮಾಡಿದ್ದರೂ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ವಾಣಿವಿಲಾಸ ಆಸ್ಪತ್ರೆಯ ವೈದ್ಯ, ಸಿಬ್ಬಂದಿಗಳೇ ಬ್ಯಾಂಕ್‌ನ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ವೈದ್ಯರಿಗೆ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ ಎಂದೂ ಹೇಳುತ್ತಾರೆ.
ದಾನಿಗಳು ನೆರವು: ತಾಯಿ ಎದೆ ಹಾಲು ಕೇಂದ್ರ ಆರಂಭಿಸಲು ಕೊರತೆಯಾಗಿರುವ ಮಿಲ್ಕ್ ಅನಲೈಜರ್ ಯಂತ್ರವನ್ನು ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳ್ಳಲು ತಡವಾಗುತ್ತದೆ. ಈ ಯಂತ್ರಕ್ಕೆ ಸುಮಾರು 12 ಲಕ್ಷ ರೂ. ವೆಚ್ಚವಾಗಲಿದ್ದು, ಯಾವುದಾದರು ಸಂಸ್ಥೆಗಳು ಅಥವಾ ದಾನಿಗಳು ಮುಂದೆ ಬಂದು ಖರೀದಿಗೆ ನೆರವಾಗಬಹುದು ಎಂದು ಆಸ್ಪತ್ರೆ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ಮನವಿ ಮಾಡಿದ್ದಾರೆ.
ಮಿಲ್ಕ್ ಅನಲೈಜರ್ ಯಂತ್ರದ ಕಾರ್ಯವೇನು?: ಅವಧಿ ಪೂರ್ವದಲ್ಲಿ ಜನಿಸಿ ಮಗು, ಅವಧಿ ಪೂರ್ಣಗೊಂಡು ಜನಿಸಿದ ಮಗು, ತಡವಾಗಿ ಜನಿಸಿದ ಮಗುವಿಗೆ ನೀಡುವ ಹಾಲಿನ ಪೋಷಕಾಂಶಗಳಲ್ಲಿ ವ್ಯತ್ಯಾಸವಿರುತ್ತದೆ. ಅದಕ್ಕನುಗುಣವಾಗಿ ಈ ಯಂತ್ರವು ಸಂಗ್ರಹಿಸಿದ ತಾಯಿ ಎದೆಹಾಲಿನಲ್ಲಿರುವ ಪ್ರೋಟಿನ್, ಕೊಬ್ಬು, ಲ್ಯಾಕ್ಟೋಸ್ ಸೇರಿದಂತೆ ಇತರೆ ಪೋಷಕಾಂಶಗಳನ್ನು ಅಳತೆ ಮಾಡುತ್ತದೆ. ಮಗು ಜನನದ ಆಧಾರದಲ್ಲಿ ಹಾಲನ್ನು ಪ್ರತ್ಯೇಕಿಸಲು ಅವಶ್ಯಕವಾಗಿದೆ ಎಂದು ವೈದ್ಯರು ತಿಳಿಸಿದರು.
ಎದೆ ಹಾಲು ಬ್ಯಾಂಕ್ ಸ್ಥಾಪಿಸಲು ಬೇಕಾದ ಬಹುತೇಕ ಪರಿಕರಗಳನ್ನು ಕರ್ನಾಟಕ ಆ್ಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸಿಟಿಕಲ್ಸ್ ಲಿಮಿಟೆಡ್ ನೀಡಿದ್ದು, ಬಾಕಿ ಉಳಿದಿರುವ ಮಿಲ್ಕ್ ಅನಲೈಜರ್ ಯಂತ್ರ ಖರೀದಿಸಲು ಟೆಂಡರ್ ಕರೆಯಬೇಕಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಮೂರು ತಿಂಗಳಾಗುತ್ತದೆ.-ಡಾ.ಗೀತಾ ಶಿವಮೂರ್ತಿ, ವೈದ್ಯಕೀಯ ಅಧೀಕ್ಷಕಿ, ವಾಣಿವಿಲಾಸ ಆಸ್ಪತ್ರೆ * ಜಯಪ್ರಕಾಶ್ ಬಿರಾದಾರ್