ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡು ಚಿನ್ನಾಭರಣ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಕೋಟ್ಯಂತರ ರೂ. ವಂಚಿಸಿದ ಮೈಸೂರು ಮೂಲದ ಸೋಮಣ್ಣ ವಿರುದ್ಧ ಮತ್ತೂಂದು ವಂಚನೆ ಪ್ರಕರಣ ದಾಖಲಾಗಿದೆ.
ಆರೋಪಿ ಸೋಮಣ್ಣ, ಕರ್ಣಾಟಕ ಬ್ಯಾಂಕ್ ಮ್ಯಾನೆಜರ್ ದೊರೆಸ್ವಾಮಿ ಎಂಬುವರಿಗೆ 2.40 ಕೋಟಿ ರೂ. ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2017ರ ಸೆಪ್ಟೆಂಬರ್‌ನಲ್ಲಿ ತಾನು ರಾಜಕೀಯ ಮುಖಂಡ, ಫೈನಾನ್ಸಿಯರ್ ಎಂದು ಪರಿಚಯಸಿಕೊಂಡ ಆರೋಪಿ ಬ್ಯಾಂಕಿನಲ್ಲಿ ವ್ಯವಹಾರ ಶುರು ಮಾಡಿದ್ದ. ಅಲ್ಲದೇ ತಾನು ಚುನಾವಣೆಯಲ್ಲಿ ನೂ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, 100 ಮತ್ತು 200 ರೂ. ಮುಖಬೆಲೆಯ ನೋಟುಗಳು ಬೇಕಿವೆ ಎಂದು 15ರಿಂದ 20 ಲಕ್ಷ ರೂ. ನಗದು ಕೊಟ್ಟು ವ್ಯವಹಾರ ನಡೆಸಿ ಬ್ಯಾಂಕ್ ವ್ಯವಸ್ಥಾಪಕ ದೊರೆಸ್ವಾಮಿ ಅವರ ನಂಬಿಕೆಗಳಿಸಿದ್ದ.
ನಂತರ ಸರ್ಕಾರದ ಕೆಲ ಯೋಜನೆಗಳಿಗೆಂದು ಹಣ ಬಿಡುಗಡೆಯಾಗುತ್ತಿದ್ದು, ನಿಮ್ಮ ಬ್ಯಾಂಕಿನಲ್ಲಿಯೇ ಠೇವಣಿ ಇಡುವುದಾಗಿ ನಂಬಿಸಿದ್ದು, ತುರ್ತಾಗಿ ಗುತ್ತಿಗೆದಾರನಿಗೆ 2.40 ಕೋಟಿ ರೂ. ಕೊಡಬೇಕು ಎಂದು ಹೇಳಿದ್ದ. ಇದನ್ನು ನಂಬಿದ ಮ್ಯಾನೇಜರ್ ದೊರೆಸ್ವಾಮಿ 2.40 ಕೋಟಿ ರೂ. ಹಣ ಕೊಟ್ಟಿದ್ದರು. ಆದರೆ, ತಿಂಗಳು ಕಳೆದರೂ ಹಣ ವಾಪಸ್ ಮಾಡಿಲ್ಲ. ಇದರಿಂದ ಅನುಮಾನಗೊಂಡು ಆರೋಪಿ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಕೂಡಲೇ ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದಾರೆ.
ಈ ಮಧ್ಯೆ ಆರೋಪಿ ಸೋಮಣ್ಣನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಆರೋಪಿಯನ್ನು ಬಾಡಿ ವಾರೆಂಟ್ ಪಡೆದು ವೈಯಾಲಿಕಾವಲ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ಪ್ರಕರಣ ಸಿಐಡಿಗೆ ವಹಿಸಲು ಮನವಿ ಇನ್ನು ಆರೋಪಿಯು, ತಾನು ಎಂಎಲ್‌ಸಿ ಸೋಮಣ್ಣ ಎಂದು ಹೇಳಿಕೊಂಡು ಬಸವೇಶ್ವರ ನಗರದಲ್ಲಿ ಚಿನ್ನದ ವ್ಯಾಪಾರಿ ಹಾಗೂ ಬಟ್ಟೆ ಅಂಗಡಿ ವ್ಯಾಪಾರಿಗೆ 1.88 ಕೋಟಿ ರೂ. ವಂಚಿಸಿದ್ದ ಬಗ್ಗೆ ಬಸವೇಶ್ವರನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ. ಚನ್ನಣ್ಣನವರ್ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.