ಹಳೆಯ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಗಾಂಧಿನಗರದಲ್ಲಿ ಹಳೆಯ ಟೈಟಲ್‌ನಡಿ ಸಾಕಷ್ಟು ಮಂದಿ ಸಿನಿಮಾ ಮಾಡುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಕಪ್ಪು ಬಿಳುಪು’ ಚಿತ್ರ. ಇದು ಕೂಡಾ ಹೊಸಬರ ಚಿತ್ರ. 1969ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ “ಕಪ್ಪು-ಬಿಳುಪು’ ಎಂಬ ಚಿತ್ರ ಬಂದಿತ್ತು. ಆ ಚಿತ್ರ ಯಶಸ್ಸು ಕಂಡಿತ್ತು.
ಈಗ ಅದೇ ಟೈಟಲ್‌ನಡಿ ಹೊಸಬರ ಸಿನಿಮಾ ಬರುತ್ತಿದೆ. ಜೀವಾ ಈ ಚಿತ್ರದ ನಾಯಕ. ಈ ಹಿಂದೆ “ವಾಟ್ಸಾಫ್ ಲವ್’ ಎಂಬ ಸಿನಿಮಾ ಮಾಡಿದ್ದ ಜೀವ ಈಗ “ಕಪ್ಪು ಬಿಳುಪು’ ಕನಸು ಕಾಣುತ್ತಿದ್ದಾರೆ. ಮಂಗಳವಾರ ಚಿತ್ರದ ಫಸ್ಟ್‌ಲುಕ್, ಮೋಶನ್ ಪೋಸ್ಟರ್ ಬಿಡುಗಡೆಯಾಯಿತು. ಪತ್ರಕರ್ತ ಶ್ರೀವತ್ಸ ನಾಡಿಗ್, ಹಿರಿಯ ನಿರ್ದೇಶಕ ತಿಪಟೂರು ರಘು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು.
ಮಂಜು ಶಿವನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ತಮಿಳು ಹಾಗೂ ಕನ್ನಡ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವಿರುವ ಶಿವನ್‌ಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರದಲ್ಲಿ ಬೆಂಗಳೂರಿನಲ್ಲಿ ಚಿಕ್ಕ ಮಕ್ಕಳನ್ನು ಬಳಸಿಕೊಂಡು, ದೊಡ್ಡವರು ಹೇಗೆ ಯಾಮಾರಿಸುತ್ತಾರೆ ಎಂಬುದನ್ನು ಹೇಳುತ್ತಿದ್ದಾರಂತೆ. ಇಂತಹ ಪ್ರಕರಣಗಳನ್ನು ತಡೆಗಟ್ಟುವುದು ಹೇಗೆ ಎಂಬ ಅಂಶವೂ ಇಲ್ಲಿ ಸೇರಿದೆಯಂತೆ.
ಬೆಂಗಳೂರಿನ ಹಿಂದುಳಿದಿರುವಂತಹ ಏರಿಯಾಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. ಇಲ್ಲಿನ ಸಮಸ್ಯೆಗಳನ್ನು ಸರ್ಕಾರಕ್ಕೂ ಮನವರಿಕೆ ಮಾಡಲಿದೆಯಂತೆ. ಚಿತ್ರದ ಬಗ್ಗೆ ಮಾತನಾಡುವ ಮಂಜು ಶಿವನ್, “ಗಟ್ಟಿಕಥೆ ಇರುವ ಸಿನಿಮಾ. ಈ ಚಿತ್ರದ ಮೂಲಕ ಜನರಿಗೆ ಕಾನೂನಿನ ಅರಿವು ಕೂಡಾ ಮೂಡಿಸುತ್ತೇವೆ’ ಎನ್ನುತ್ತಾರೆ.
ಚಿತ್ರದಲ್ಲಿ ಪೂಜಾ ಶರ್ಮಾ ಹಾಗೂ ಐಶ್ಚರ್ಯಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಜೆ.ಪಿ.ಆರ್.ಜಿ. ಫಿಲಂಸ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗುತ್ತಿದೆ. ಚಿತ್ರಕ್ಕೆ ಬಿ.ಆರ್.ಹೇಮಂತಕುಮಾರ ಜುಲೈ 15 ರಿಂದ ಶೂಟಿಂಗ್ ಆರಂಭಿಸಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ದಸರಾ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.