ಮುಧೋಳ: ತಾಲೂಕಿನ ನೀರಾವರಿ ಪ್ರದೇಶದ ವಿಸ್ತರಣೆಗೆ ಮುಂದಾಗಿರುವ ಕ್ಷೇತ್ರದ ಶಾಸಕ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ರೈತರ ಬಹುದಿನದ ಬೇಡಿಕೆಯಾಗಿರುವ ಚಿಂಚಖಂಡಿ ಬ್ಯಾರೇಜ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕ್ಷೇತ್ರದ ರೈತಬಾಂಧವರ ಸಂತಸ ಇಮ್ಮಡಿಗೊಳಿಸಿದೆ.
ಅತಿಯಾದ ಮಳೆ ಹಾಗೂ ಪ್ರವಾಹದಂತಹ ಸನ್ನಿವೇಶದಲ್ಲಿ ಚಿಂಚಖಂಡಿ ಗ್ರಾಮದ ಪಕ್ಕದಲ್ಲಿರುವ ಘಟಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಅಲ್ಲಿನ ನೀರು ತಡೆ ಹಿಡಿದು ನದಿ ತಟದಲ್ಲಿರುವ ರೈತರ ಜಮೀನುಗಳಿಗೆ ನೀರುಣಿಸುವುದು, ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೈಗೊಂಡ ಈ ಕಾರ್ಯ ಈ ಭಾಗದ ರೈತರಲ್ಲಿ ಹೊಸ ಆಸೆ ಮೂಡಿಸಿದೆ.
12 ಬ್ಯಾರೇಜ್‌ಗಳು: ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಸದ್ಯ 12 ಬ್ಯಾರೇಜ್ ಗಳು ನಿರ್ಮಾಣಗೊಂಡಿವೆ. ಢವಳೇಶ್ವರ, ಮಿರ್ಜಿ, ಚನ್ನಾಳ, ಜಾಲಿಬೇರಿ, ಮುಧೋಳ, ಜೀರಗಾಳ, ಇಂಗಳಗಿ, ಜಂಬಗಿ ಕೆ.ಡಿ., ತಿಮ್ಮಾಪುರ, ಮಾಚಕನೂರ, ಆಲಗುಂಡಿ ಸೇರಿದಂತೆ ಅನೇಕ ಬ್ಯಾರೇಜ್‌ಗಳು ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರೊದಗಿಸುತ್ತಿವೆ. ಇದೀಗ ಚಿಂಚಖಂಡಿ ಬ್ಯಾರೇಜ್ ನಿರ್ಮಾಣವಾದರೆ ತಾಲೂಕಿನಲ್ಲಿ ನೀರಾವರಿ ಪ್ರದೇಶ ಮತ್ತಷ್ಟು ವಿಸ್ತಾರಗೊಂಡಂತಾಗುತ್ತದೆ.
ಸಾವಿರಾರು ಎಕರೆ ಪ್ರದೇಶಕ್ಕೆ ನೀರು: ಈಗಾಗಲೇ ತಾಲೂಕಿನಲ್ಲಿ 12 ಬ್ರಿಜ್ ಕಂ ಬ್ಯಾರೇಜ್‌ನಿಂದ ಸಾವಿರಾರು ಎಕರೆ ಭೂ ಪ್ರದೇಶ ನೀರಾವರಿ ಸೌಲಭ್ಯ ಪಡೆದಿದೆ. ಅಷ್ಟೇ ಅಲ್ಲ ಕುಡಿಯುವ ನೀರು, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಬ್ಯಾರೇಜ್‌ಗಳು ಪ್ರಮುಖ ಪಾತ್ರ ವಹಿಸಿವೆ. ಇದೀಗ ಚಿಂಚಖಂಡಿ ಬ್ಯಾರೇಜ್ ನಿಂದ ನೀರು ಹಿಡಿದಿಡುವ ಕಾರ್ಯ ಹೆಚ್ಚಿ ನೀರಾವರಿ ಭೂ ಪ್ರದೇಶದ ವಿಸ್ತೀರ್ಣ ಹೆಚ್ಚಾದಂತಾಗಿದೆ.
ಬೇಸಿಗೆಯಲ್ಲಿ ಹೆಚ್ಚು ಅನುಕೂಲ: ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಚಿಂಚಖಂಡಿ ಬ್ಯಾರೇಜ್‌ನಿಂದ ಬೇಸಿಗೆ ಕಾಲದಲ್ಲಿ ಅನುಕೂಲ ಹೆಚ್ಚಾಗಲಿದೆ. ಹಿಡಕಲ್ ಜಲಾಶಯದಿಂದ ಬೇಸಿಗೆ ವೇಳೆಯಲ್ಲಿ ನೀರು ಹರಿಸಿದರೆ ಈ ಭಾಗದ ಹಳ್ಳಿಗಳಿಗೆ ಬೇಸಿಗೆ ವೇಳೆ ಕುಡಿಯುವ ನೀರು ಹಾಗೂ ದನಕರುಗಳ ದಾಹ ನೀಗಿಸಲು ಅನುಕೂಲವಾಗಲಿದೆ. ಮಳೆಗಾಲ ದಿನಗಳಲ್ಲಂತೂ ಮಳೆಯ ಆರ್ಭಟದಿಂದ ಈ ಭಾಗದಲ್ಲಿ ಪ್ರವಾಹವೇ ಉಕ್ಕಿ ಹರಿಯುತ್ತದೆ. ಆದರೆ ಮಳೆಗಾಲ ಕಳೆದು ಒಂದು ತಿಂಗಳಾಗುವಷ್ಟರಲ್ಲಿ ನದಿ ಪಾತ್ರವೆಲ್ಲ ಒಣಗಿರುತ್ತದೆ. ಬಾರೇಜ್ ನಿರ್ಮಾಣದಿಂದ ನೀರಿನ ಸಂಗ್ರಹಕ್ಕೆ ಅನುಕೂಲವಾಗಲಿದೆ.
9.90 ಕೋಟಿ ವೆಚ್ಚ: ಜನರ ಅನುಕೂಲಕ್ಕೆ ಕೈಗೊಂಡಿರುವ ಬ್ಯಾರೇಜ್ ನಿರ್ಮಾಣ ಕಾರ್ಯಕ್ಕೆ ಒಟ್ಟು 9.90 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬ್ಯಾರೇಜ್ 99 ಮೀಟರ್ ಉದ್ದ, ಮೇಲ್ಭಾಗದಲ್ಲಿ 5.5 ಮೀ.ಅಗಲ, 4 ಮೀಟರ್ ಎತ್ತರ, 19 ಮುಖ್ಯ ನಡುಗಂಬ ಹಾಗೂ 20 ಕಿಂಡಿಗಳನ್ನು ಹೊಂದಿರಲಿದೆ. ಬ್ಯಾರೇಜ್ ನಿರ್ಮಾಣದಿಂದ ಚಿಂಚಖಂಡಿ ಹಾಗೂ ಸುತ್ತಲಿನ ಅಂದಾಜು 268 ಹೆಕ್ಟೇರ್ ಭೂ ಪ್ರದೇಶ ನೀರಾವರಿಯಾಗಲಿದೆ.
ಗೋವಿಂದಪ್ಪ ತಳವಾರ