ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರೆ ಅದು ಮತ್ತೂಂದು ಅಯೋಧ್ಯೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ಗೆ ಶುಕ್ರವಾರ ಅರಿಕೆ ಮಾಡಲಾಗಿದೆ. ದೇಗುಲಕ್ಕೆ ಮಹಿಳೆಯರ ಪ್ರವೇಶ ಬೇಡ ಎಂದು ವಾದಿಸುತ್ತಿರುವ ಕ್ಷೇತ್ರ ಸಂರಕ್ಷಣಾ ಸಮಿತಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠಕ್ಕೆ ಈ ಮನವಿ ಮಾಡಿಕೊಂಡಿದೆ.
ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ಧಕ್ಕೆ ತಂದರೆ ಕೇರಳದಲ್ಲಿ ಸಾಮಾಜಿಕವಾಗಿ ತಲ್ಲಣ ಉಂಟಾದೀತು. ಜತೆಗೆ ಅಯೋಧ್ಯೆ ಮಾದರಿಯ ಮತ್ತೂಂದು ಪ್ರಕರಣದ ಆರಂ ಭಕ್ಕೆ ದಾರಿ ಮಾಡಿಕೊಟ್ಟಂತಾದೀತು ಎಂದು ಕ್ಷೇತ್ರ ಸಂರಕ್ಷಣಾ ಸಮಿತಿ ಪರ ನ್ಯಾಯವಾದಿ ಕೈಲಾಸನಾಥ ಪಿಳ್ಳೆ ವಾದಿಸಿದ್ದಾರೆ.
ಅದಕ್ಕೆ ಉತ್ತರಿಸಿದ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ, ಕೇರಳದ ದೇಗುಲ ಗಳು ಸಾಂವಿಧಾನಿಕವಾಗಿರುವ ಅಂಶಗಳ ಪಾಲನೆಗೆ ದಾರಿ ಕೊಡಬೇಕು ಎಂದರು. ಶಬರಿ ಮಲೆಯಲ್ಲಿರುವ ದೇಗುಲದಲ್ಲಿ ಧಾರ್ಮಿಕ ಕ್ರಮಗಳು ಮತ್ತು ಸಂಪ್ರದಾಯಕ್ಕೆ ಅವಕಾಶ ಮಾಡಿಕೊಡಬೇಕು ನಿಜ. ಆದರೆ ಸಮಾಜದ ಒಂದು ವರ್ಗವಾಗಿರುವ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಸರಿಯೇ? ನಿಮ್ಮ ಯಾ ವುದೇ ಸಂಪ್ರದಾಯಗಳು ಸಂವಿಧಾನವನ್ನು ಮೀರಿ ನಿಲ್ಲಬಾರದು’ ಎಂದರು.
ಪೀಪಲ್ ಫಾರ್ ಧರ್ಮ ಎಂಬ ಸಂಘಟನೆಯ ಪರವಾಗಿ ವಾದಿಸಿದ ನ್ಯಾಯವಾದಿ ಸಾಯಿ ದೀಪಕ್ “ಅಯ್ಯಪ್ಪ ಭಕ್ತರು ತಮ್ಮದೇ ಆದ ಪ್ರತ್ಯೇಕತೆಯನ್ನು ಕಂಡುಕೊಂಡಿದ್ದಾರೆ. ಅದನ್ನು ಗೌರವಿಸಬೇಕು. ಜತೆಗೆ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎನ್ನುವುದು ತಾರತಮ್ಯವಾಗುವುದಿಲ್ಲ’ ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನ್ಯಾ.ಡಿ.ವೈ.ಚಂದ್ರಚೂಡ್ ಸಾಂವಿಧಾನಿಕವಾಗಿ ಕೆಲ ವರ್ಗಗಳ ಮೇಲೆ ತಡೆಯೊಡ್ಡುವುದು ಸರಿಯಲ್ಲ ಎಂದರು.