“ಲಕ್ಷ್ಮಣ’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ಅನೂಪ್ ರೇವಣ್ಣ ಅವರ ಎರಡನೇ ಚಿತ್ರ “ಪಂಟ’ ಈಗ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಪಂಟ’ ಚಿತ್ರ ಬಿಡುಗಡೆಗೆ ಫೆಬ್ರವರಿಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದಲ್ಲಿ ಐಟಂ ಸಾಂಗ್ ಇದ್ದರೆ ಚೆನ್ನ ಎಂದು ನಿರ್ಮಾಪಕರು ಅಭಿಪ್ರಾಯಪಟ್ಟಿದ್ದರಿಂದ, “ಕುಲುಕು’ ಕುಲುಕು’ ಎಂಬ ಐಟಂ ಸಾಂಗ್ವೊಂದನ್ನು ಸೇರಿಸಿ, ಇದೇ 23ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
“ಪಂಟ’ ಚಿತ್ರೀಕರಣ ಮುಗಿಸಿಕೊಟ್ಟು ಆ್ಯಕ್ಟಿಂಗ್ ಕೋರ್ಸ್ಗಾಗಿ ಅಮೆರಿಕಾಕ್ಕೆ ಹೋಗಿದ್ದ ಅನೂಪ್ ಈಗ “ಕುಲುಕು ಕುಲುಕು’ ಸಾಂಗ್ನಲ್ಲೂ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅನೂಪ್ ಈಗ ಹಾಲಿವುಡ್ನಲ್ಲೂ ಮೂರು ಸಿನಿಮಾ ಮಾಡುತ್ತಿದ್ದಾರಂತೆ. ಹಾಗಂತ ಹೀರೋ ಆಗಿ ಅಲ್ಲ, ಚಿತ್ರದಲ್ಲಿನ ಪ್ರಮುಖ ಪಾತ್ರದಲ್ಲಿ. ಎರಡು ಚಿತ್ರಗಳು ಮುಂದಿನ ವರ್ಷ ಆರಂಭವಾಗಲಿದ್ದು, ಇನ್ನೊಂದು ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ತಯಾರಾಗುತ್ತಿರುವ ಚಿತ್ರ ಇದೇ ವರ್ಷ ಆರಂಭವಾಗಲಿದೆಯಂತೆ.
ಅಷ್ಟಕ್ಕೂ ಅನೂಪ್ಗೆ ಹಾಲಿವುಡ್ ಲಿಂಕ್ ಹೇಗೆ ಎಂದು ನೀವು ಕೇಳಬಹುದು. ಸದ್ಯ ಅನೂಪ್ ಅಮೆರಿಕಾದಲ್ಲಿ ಆ್ಯಕ್ಟಿಂಗ್ ಕೋರ್ಸ್ ಮಾಡುತ್ತಿದ್ದಾರೆ. ಹಾಲಿವುಡ್ನ ಸಾಕಷ್ಟು ನಟರು, ನಿರ್ದೇಶಕರು ಬಂದು ಇವರಿಗೆ ನಟನೆ ವಿಷಯದಲ್ಲಿ ಪಾಠ ಮಾಡುತ್ತಿದ್ದಾರಂತೆ. ಜೊತೆಗೆ ಅನೂಪ್ ಅಮೆರಿಕಾದಲ್ಲೂ ಒಬ್ಬ ಮ್ಯಾನೇಜರ್ ಇಟ್ಟುಕೊಂಡಿದ್ದು ಅವರಿಗೆ ಹಾಲಿವುಡ್ನ ಲಿಂಕ್ ಇರುವುದರ ಜೊತೆಗೆ ಅವರು ಕೂಡಾ ಸಿನಿಮಾ ನಿರ್ಮಾಣದಲ್ಲಿದ್ದಾರಂತೆ.
ಈ ಎಲ್ಲಾ ಕಾರಣಗಳಿಂದಾಗಿ ಅನೂಪ್ಗೆ ಹಾಲಿವುಡ್ನ ಮೂರು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ. ಅನೂಪ್ಗೆ ಕನ್ನಡದಲ್ಲೂ ಒಂದಷ್ಟು ಅವಕಾಶವಿದ್ದು, ಹೊಸ ನಿರ್ದೇಶಕರೊಬ್ಬರ ಚಿತ್ರವನ್ನು ಅನೂಪ್ ಒಪ್ಪಿಕೊಂಡಿದ್ದಾರೆ. ಜೊತೆಗೆ ಎಂ.ಎಸ್.ರಮೇಶ್ ನಿರ್ದೇಶನದ ಒಂದು ಚಿತ್ರ ಹಾಗೂ ನಾಗಣ್ಣ ನಿರ್ದೇಶನದ “ಕುರುಕ್ಷೇತ್ರ’ ಚಿತ್ರದಿಂದಲೂ ಅನೂಪ್ಗೆ ಆಫರ್ ಇದೆಯಂತೆ. ಸದ್ಯ “ಪಂಟ’ ಪ್ರಮೋಶನ್ನಲ್ಲಿ ಬಿಝಿಯಾಗಿದ್ದಾರೆ ಅನೂಪ್.