ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವವರು ಸಾಮಾನ್ಯವಾಗಿ ಬಹುದೊಡ್ಡ ಸಂಸ್ಥೆಯನ್ನು ಸ್ಥಾಪಿಸಿರುತ್ತಾರೆ. ಇಲ್ಲವೇ, ಪಿತ್ರಾರ್ಜಿತವಾಗಿ ಬಂದ ಸಂಸ್ಥೆಯ ಹುದ್ದೆಯನ್ನು ಅಲಂಕರಿಸುತ್ತಾರೆ. ಆದರೆ ಅಶ್ವಿನ್ ದಾನಿಯವರ ಕಥೆ ಹಾಗಿಲ್ಲ. ಅವರು ಬೇರೊಂದು ಕಂಪನಿಯಿಂದ ಏಷ್ಯನ್ ಪೇಂಟ್ಸ್ ಸಂಸ್ಥೆಗೆ ಸೇರಿದವರು. 1968ರಲ್ಲಿ ಅವರು ಅಮೆರಿಕದ ಸಂಸ್ಥೆಗೆ ರಾಜೀನಾಮೆ ನೀಡಿ ಭಾರತದ ಏಷ್ಯನ್ ಪೇಂಟ್ಸ್ ಸಂಸ್ಥೆಗೆ ಸೇರಿದ್ದರು.
ಅಮೆರಿಕದ ವಿವಿಯಿಂದ ಪೇಂಟ್‌ಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದಿದ್ದ ಅಶ್ವಿನ್, ತಂತ್ರಜ್ಞಾನದ ಕುರಿತು ವಿಶೇಷ ಆಸಕ್ತಿ ಹೊಂದಿದ್ದರು. ಏಷ್ಯನ್ ಪೇಂಟ್ಸ್ ಮೂಲಕ, ಭಾರತದಲ್ಲೇ ಪ್ರಪ್ರಥಮ ಎನ್ನುವಂಥ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಕಂಪ್ಯೂಟರ್ ಆಧಾರಿತ ಪೇಂಟ್ ಮ್ಯಾಚಿಂಗ್ ಎನ್ನುವ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲು ಅಳವಡಿಸಿದವರು ಅಶ್ವಿನ್. ದಶಕಗಳ ಕಾಲ ಒಂದೇ ಸಂಸ್ಥೆಯಲ್ಲಿ ನಿಷ್ಠಾವಂತರಾಗಿ ಕರ್ತವ್ಯ ನಿರ್ವಹಿಸಿದ ಅಶ್ವಿನ್, ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾ ಬಂದರು.
ಪ್ರಪಂಚದ ಹೆಸರಾಂತ ಆಟೊಮೋಟಿವ್ ಕೋಟಿಂಗ್ ಸಂಸ್ಥೆ “ಪಿಪಿಜಿ ಇಂಡಸ್ಟ್ರೀಸ್’ ಜೊತೆ ಏಷ್ಯನ್ ಪೇಂಟ್ಸ್ 50:50 ಪಾಲುದಾರಿಕೆ ಮಾಡಿಕೊಳ್ಳುವಲ್ಲಿ ಅಶ್ವಿನ್ ವಹಿಸಿದ ಪಾತ್ರ ದೊಡ್ಡದು. ಇಂದು ಏಷ್ಯನ್ ಪೇಂಟ್ಸ್ ಏಷ್ಯಾದ ಮೂರನೇ ಅತಿದೊಡ್ಡ ಪೇಂಟ್ ಸಂಸ್ಥೆಯಾಗಿದೆ. 16ಕ್ಕೂ ಹೆಚ್ಚು ದೇಶಗಳಲ್ಲಿ ಏಷ್ಯನ್ ಪೇಂಟ್ಸ್ ಕಾರ್ಯನಿರ್ವಹಿಸುತ್ತಿದೆ. ಅದರ ಯಶಸ್ಸಿನಲ್ಲಿ ಅಶಿನ್ ಅವರ ಪಾಲು ಕೂಡಾ ಇದೆ.
ಉದ್ಯೋಗ : ನಾನ್ ಎಕ್ಸಿಕ್ಯುಟಿವ್ ಚೇರ್‌ಮನ್
ಸಂಪತ್ತು: 31,160 ಕೋಟಿ ರೂಪಾಯಿ