ಮುಂಬಯಿ: ಅಂಧೇರಿ ಪಶ್ಚಿಮದ ಇರ್ಲಾದಲ್ಲಿರುವ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ 25ನೇ ವಾರ್ಷಿಕ ಶ್ರೀರಾಮ ನವಮಿ ಆಚರಣೆಯು ಎ. 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕೊರೊನಾ ಮಾರ್ಗಸೂಚಿಗಳಿಗೆ ಅನಗುಣವಾಗಿ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು. ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಅನುಗ್ರಹದಿಂದ ಧಾರ್ಮಿಕ ಪೂಜೆಗಳು ನಡೆದವು.
ಬೆಳಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ರಾತ್ರಿ ಪೂಜೆ ನಡೆದು ಮಠದಲ್ಲಿ ಪ್ರತಿಷ್ಠಾಪಿತ ಶ್ರೀ ದೇವರಿಗೆ ಪೂಜೆ ನೆರವೇರಿಸಲಾಯಿತು. ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್ ರಾವ್ ಪೂಜಾವಿಧಿಗಳನ್ನು ನೆರವೇರಿಸಿದರು.
ವಿದ್ವಾನ್ ಜನಾರ್ದನ ಅಡಿಗ, ರಾಘವೇಂದ್ರ ಉಡುಪ, ಶಂಕರ ಕಲ್ಯಣಿತ್ತಾಯ ಅವರು ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಬಿ. ಆರ್. ರೆಸ್ಟೋರೆಂಟ್ಸ್
ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ. ಆರ್. ಶೆಟ್ಟಿ ಉಪಸ್ಥಿತರಿದ್ದು ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿದರು.
ಚಿತ್ರ -ವರದಿ: ರೋನ್ಸ್ ಬಂಟ್ವಾಳ್