ಉಡುಪಿ: ಡಿಜಿಟಲೀಕರಣ ಜಾಗತಿಕ ವಹಿವಾಟು ಮಾದರಿಯನ್ನು ಬದಲಾಯಿಸಿದೆ. ಮಾನವ ಸಂಪನ್ಮೂಲದ ಪಾತ್ರ ಸತತವಾಗಿ ಆಡಳಿತದಿಂದ ಎಚ್‌ಆರ್ ಪ್ರಕ್ರಿಯೆ ಹಾಗೂ ಯೋಜನೆಗಳಿಗೆ ವರ್ಗಾವಣೆಯಾಗುತ್ತಿದೆ.
ವಿಕಾಸಗೊಳ್ಳುತ್ತಿರುವ ಕೈಗಾರಿಕಾ ಅಗತ್ಯಗಳನ್ನು ಪೂರೈಸಲು ಕೌಶಲ ಮತ್ತು ಸಾಮರ್ಥ್ಯವನ್ನು ಒಟ್ಟುಗೂಡಿಸಿ ವರ್ಧಿಸಿಕೊಳ್ಳುವುದು ಮಾನವ ಸಂಪನ್ಮೂಲಕ್ಕೆ ಅತ್ಯಗತ್ಯ ಎಂದು ರಿಲಯೆನ್ಸ್ ಇಂಡಸ್ಟ್ರೀಸ್‌ನ ಸಂಘಟನಾ ಅಭಿವೃದ್ಧಿ ವಿಭಾಗದ ಹಿರಿಯ ಉಪಾಧ್ಯಕ್ಷ ಮನೋಜ್ ಪ್ರಸಾದ್ ಹೇಳಿದರು.
ಅವರು ಮಂಗಳವಾರ ಆರಂಭವಾದ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ 9ನೇ ವರ್ಷದ ವಾರ್ಷಿಕ ಮಾನವ ಸಂಪನ್ಮೂಲ ಸಮಾವೇಶ “ದಿಶಾ’ ಕಾರ್ಯಕ್ರಮದಲ್ಲಿ ಮಾತನಾಡಿದರು. “ರೂಪ ಪರಿವರ್ತನೆ-ಬದಲಾವಣೆ ಮಾತ್ರ ಸ್ಥಿರ’ ಎನ್ನುವ ಉದ್ದೇಶದೊಂದಿಗೆ 3 ದಿನಗಳ ಕಾಲ ಸಮಾವೇಶ ನಡೆಯಲಿದೆ.
ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಪ್ರೊ| ಮಧು ವೀರ ರಾಘವನ್ ಮಾತನಾಡಿ, ದಿಶಾ ಟ್ಯಾಪ್ಮಿಯ ಪ್ರಮುಖ ಕಾರ್ಯಕ್ರಮವಾಗಿದ್ದು, ಮಾನವಸಂಪನ್ಮೂಲ ಕ್ಷೇತ್ರದಲ್ಲಿ ಪ್ರಸ್ತುತ ವಿದ್ಯಮಾನ, ಸವಾಲುಗಳು ಮತ್ತು ಅವಕಾಶಗಳನ್ನು ಸ್ಪಷ್ಟವಾಗಿ ತಿಳಿಸಲು ಕೈಗಾರಿಕಾ ನಾಯಕರಿಗೆ ಇದು ವೇದಿಕೆ ಒದಗಿಸಿಕೊಡಲಿದೆ ಎಂದರು.
ಸೀಮನ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ, ಕಾರ್ಯ ನಿರ್ವಾಹಕ ಉಪಾಧ್ಯಕ್ಷ ರಮೇಶ್ ಶಂಕರ್ ಉಪಸ್ಥಿತರಿದ್ದರು.