Advertisement

ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕೆ.ರಘು ಸಲಹೆ

05:04 PM Jul 07, 2018 | |

ಹುಬ್ಬಳ್ಳಿ: ಲೆಕ್ಕಪರಿಶೋಧಕರು ವೃತ್ತಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡರೆ ಮಾತ್ರ ಅವಕಾಶ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ರಘು ಹೇಳಿದರು. ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಎರಡು ದಿನಗಳ ವಾರ್ಷಿಕ ಸಮ್ಮೇಳನ ‘ಜ್ಞಾನ ಸಿಂಧು’ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಲೆಕ್ಕಪರಿಶೋಧನೆ ವೃತ್ತಿಯ ಭವಿಷ್ಯ ಉಜ್ವಲವಾಗಿದೆ. ಅವಕಾಶ ಸದ್ಬಳಕೆಗೆ ಹೊಸ ತಂತ್ರಜ್ಞಾನ ಮುಖ್ಯವಾಗಿದೆ. ಲೆಕ್ಕಪರಿಶೋಧಕರು ಹೊಸ ತಂತ್ರಜ್ಞಾನಕ್ಕೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ ಎಂಬ ದೂರಿದ್ದು, ನಾವು ಹೊಸತನಕ್ಕೆ ಒಗ್ಗಿಕೊಳ್ಳದಿದ್ದರೆ ಸ್ಪರ್ಧೆಯಲ್ಲಿ ಉಳಿಯಲು ಸಾಧ್ಯವಿಲ್ಲ. ಸರ್ವರ್‌ ಗಳಲ್ಲಿ ಎಲ್ಲ ಮಾಹಿತಿ ಸಂಗ್ರಹ ಹಳತಾಗಿದೆ. ಕ್ಲೌಡ್  ಅಕೌಂಟಿಂಗ್‌ ತಿಳಿಯುವುದು ಅತ್ಯಗತ್ಯ ಎಂದರು. ವಿಶ್ಲೇಷಣಾತ್ಮಕತೆಗೆ (ಅನಾಲಿಟಿಕ್ಸ್‌) ಅಗಾಧ ಬೇಡಿಕೆಯಿದ್ದು, ಅದನ್ನು ನಿರ್ಲಕ್ಷಿಸುವ ಮೂಲಕ ನಾವು ಹಲವಾರು ಅವಕಾಶ ಕಳೆದುಕೊಳ್ಳುತ್ತಿದ್ದೇವೆ. ಕೃತಕ ಬುದ್ಧಿಮತ್ತೆ ತಿಳಿಯುವುದು ಕೂಡಾ ಅಗತ್ಯವಾಗಿದೆ ಎಂದರು.

ಮುಂದಿನ ಕೆಲ ವರ್ಷಗಳಲ್ಲಿ ಇಂಟರ್‌ ನೆಟ್‌ ತಂತ್ರಜ್ಞಾನ ಹಳತಾಗಲಿದೆ. ಸದ್ಯ ಭವಿಷ್ಯದಲ್ಲಿ ಬ್ಲಾಕ್‌ ಚೈನ್‌ ತಂತ್ರಜ್ಞಾನ ಬರಲಿದೆ. ಮಾಹಿತಿ ಬ್ಲಾಕ್‌ಗಳಲ್ಲಿ ಸಂಗ್ರಹಗೊಳ್ಳಲಿದೆ. ಇದರಿಂದ ಸಮಯ ಉಳಿತಾಯ ಮಾಡಬಹುದಾಗಿದೆಯಲ್ಲದೇ ಸೈಬರ್‌ ದಾಳಿ ತಡೆಯುವ ದಿಸೆಯಲ್ಲಿ ಇದು ಪೂರಕವಾಗಿದೆ. ವೃತ್ತಿಯ ಗುಣಮಟ್ಟ ಹೆಚ್ಚಿಸುವಲ್ಲಿ ರೋಬೊಟಿಕ್ಸ್‌ ನೆರವಾಗಲಿದೆ ಎಂದರು.

ಐಸಿಎಐ ಮಾಜಿ ಅಧ್ಯಕ್ಷ ಸುನೀಲ್‌ ತಲಾಟಿ ಮಾತನಾಡಿ, ಜಿಎಸ್‌ಟಿ ಅನುಷ್ಠಾನಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೆಕ್ಕಪರಿಶೋಧಕರು ತಮ್ಮ ಕಾರ್ಯವೈಖರಿಯನ್ನು ಪರಾಮರ್ಶಿಸಿಕೊಳ್ಳುವುದು ಅವಶ್ಯಕವಾಗಿದೆ. ದೇಶದಲ್ಲಿ 1,25,000 ಲೆಕ್ಕಪರಿಶೋಧಕರಿದ್ದು, ಬೇಡಿಕೆ ಹೆಚ್ಚಾಗುತ್ತಿದೆ ಎಂದರು. ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ನಿಯಂತ್ರಣ ಕಾಯ್ದೆ ತಂದಿದ್ದರಿಂದ ಲೆಕ್ಕಪರಿಶೋಧಕರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಜಾಗತಿಕ ಮಟ್ಟದ ಅವಕಾಶ ಪಡೆಯುವ ದಿಸೆಯಲ್ಲಿ ನಾವು ಕಾರ್ಯೋನ್ಮುಖರಾಗಬೇಕೆಂದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಚೇರ್ಮನ್‌ ಎಸ್‌. ರವೀಂದ್ರನ್‌ ಮಾತನಾಡಿ, ಬ್ಯಾಂಕ್‌ಗಳ ಶ್ರೇಯೋಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಪ್ರಮುಖವಾಗಿದೆ. ಜಿಎಸ್‌ಟಿಯಿಂದಾಗಿ ಲೆಕ್ಕಪರಿಶೋಧಕರ ಅವಶ್ಯಕತೆ ಹೆಚ್ಚಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಬಸಂತಕುಮಾರ ಪಾಟೀಲ ಮಾತನಾಡಿ, ಹುಬ್ಬಳ್ಳಿಯ ಕೋರ್ಟ್‌ ವೃತ್ತದ ಸಮೀಪ ನಾನು ನಿರ್ಮಿಸುತ್ತಿರುವ ಮಾಲ್‌ನಲ್ಲಿ ಒಂದು ಸುಸಜ್ಜಿತ ಮಹಡಿಯನ್ನು ಲೆಕ್ಕಪರಿಶೋಧಕರಿಗಾಗಿ ಮೀಸಲಾಗಿಟ್ಟಿದ್ದು, ಲೆಕ್ಕಪರಿಶೋಧಕರು ಇಲ್ಲಿ ತಮ್ಮ ಕಚೇರಿ ಮಾಡಿಕೊಳ್ಳಬಹುದಾಗಿದೆ ಎಂದು ನುಡಿದರು. ರಾಘವೇಂದ್ರ ಜೋಶಿ, ಸುಭಾಸ ಪಾಟೀಲ, ಗುರುಮೂರ್ತಿ ಬಿ.ಎಂ, ವಿಘ್ನೇಶ್ವರ ಗಾಂವಕರ, ಎಸ್‌.ಡಿ.ಓಸ್ತವಾಲ್‌ ಮೊದಲಾದವರಿದ್ದರು.

Advertisement

ಬ್ಯಾಂಕ್‌ಗಳಲ್ಲಿ ಹಣಕಾಸು ಅವ್ಯವಹಾರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಿಎನ್‌ಬಿ, ಸತ್ಯಂ ಹಗರಣಗಳು ಇದಕ್ಕೆ ಉದಾಹರಣೆಗಳಾಗಿವೆ. ಇವುಗಳನ್ನು ತಡೆಯುವಲ್ಲಿ ಲೆಕ್ಕಪರಿಶೋಧಕರ ಪಾತ್ರ ಮುಖ್ಯವಾಗಿದೆ. ಲೆಕ್ಕಪತ್ರದಲ್ಲಿ ಅಪರಾ ತಪರಾ ತಡೆಯುವ ನಿಟ್ಟಿನಲ್ಲಿ ಲೆಕ್ಕಪರಿಶೋಧಕರು ಫ್ರಾಡ್‌ ಡಿಟೆಕ್ಷನ್‌ ವಿಷಯದಲ್ಲಿ ಪರಿಣಿತಿ ಹೊಂದುವುದು ಅವಶ್ಯ ಎಂದು ಐಸಿಎಐ ಮಾಜಿ ಅಧ್ಯಕ್ಷ ಕೆ.ರಘು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next