ಕೊಟ್ಟೂರು: ತಾಲೂಕಿನಲ್ಲಿ ಆಹಾರ ಇಲಾಖೆಯ ಸರ್ವರ್‌ನಲ್ಲಿ ತಾಂತ್ರಿಕ ತೊಂದರೆಯಾಗಿದ್ದು, ಸರಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆಯಲು ಪಡಿತರದಾರರಿಗೆ ಅಡ್ಡಿಯಾಗಿದೆ.
ಪಡಿತರದಾರರು ತಮಗೆ ಹಂಚಿಕೆಯಾದ ಆಹಾರ ಧಾನ್ಯ ಪಡೆಯಲು ಸರಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳು ಗುರುತು ನೀಡುವುದು ಕಡ್ಡಾಯವಾಗಿದೆ.ಆದರೆ ಪ್ರತಿ ತಿಂಗಳು ನಿರಾತಂಕವಾಗಿ ನಡೆಯುತ್ತಿದ್ದ ಪಡಿತರದಾರರಿಗೆ ಈ ತಿಂಗಳಲ್ಲಿ ಸರ್ವರ್ ತಾಂತ್ರಿಕ ತೊಂದರೆಯಿಂದಾಗಿ ಆಹಾರ ಧಾನ್ಯ ಪಡೆಯಲು ಅಡ್ಡಿಯಾಗಿದೆ.
ಕಳೆದ ಮೂರು ದಿನಗಳಿಂದ ಆಹಾರ ಇಲಾಖೆ ಸರ್ವರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಪಡಿತರದಾರರು ರೇಷನ್ ಪಡೆಯಲು ಸಾಧ್ಯವಾಗುತ್ತಿಲ್ಲ.
ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 10ರ ನಂತರ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಅದೇ ರೀತಿ ಆಹಾರ ಧಾನ್ಯ ವಿತರಿಸಲು ಮುಂದಾದ ನ್ಯಾಯಬೆಲೆ ಅಂಗಡಿಯವರಿಗೆ ಸರ್ವರ್ ತಾಂತ್ರಿಕ ತೊಂದರೆ ದೊಡ್ಡ ತಲೆನೋವಾಗಿದೆ. ಕಳೆದ ಮೂರು ದಿನಗಳಿಂದ ಸರ್ವರ್‌ನಲ್ಲಿ ತೊಂದರೆಯಾಗಿದ್ದು, ಈಗ ಸರಿಹೋಗಬಹುದು, ಆಗ ಸರಿಹೋಗಬಹುದು ಎಂಬ ನ್ಯಾಯಬೆಲೆ ಅಂಗಡಿಯವರ ನಿರೀಕ್ಷೆ ಹುಸಿಯಾಗಿದೆ.
ಸರ್ವರ್ ಸರಿಯಾದರೂ ಒಂದು ಕಾರ್ಡ್ ವಿತರಣೆಗೆ ಒಕೆ ಮಾಡುತ್ತಿದ್ದಂತೆ ನೆಟ್ ಆಫ್ ಆಗುತ್ತಿದೆ. ಇದೇ ರೀತಿಯ ಸಮಸ್ಯೆಯಿಂದ ಪಡಿತರದಾರರು ಅಂಗಡಿಗಳಿಗೆ ಬರುವುದು ವಾಪಸ್ ಹೋಗುವುದು ಅನಿವಾರ್ಯವಾಗಿದೆ. ಬುಧವಾರವೂ ಸಹ ಸರ್ವರ್ ಸಮಸ್ಯೆಯಿಂದ ಜನರು ಪಡಿತರ ಪಡೆಯಲಾಗದೆ ಮರಳಿದ್ದಾರೆ.
ಮೂರು ದಿನಗಳಿಂದ ಆಹಾರ ಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುತ್ತಿದ್ದೇವೆ. ಸರ್ವರ್ ಸಮಸ್ಯೆಯಿಂದ ನಮ್ಮ ಬೆರಳು ಗುರುತು ಪಡೆಯಲು ಸಾಧ್ಯವಾಗಿಲ್ಲ. ತಾಂತ್ರಿಕ ಸಮಸ್ಯೆ ಎಂದು ಹೇಳಿದ್ದಾರೆ. ಮೂರು ದಿನವಾದರೂ ಅದೇ ಸಮಸ್ಯೆ ಮುಂದುವರಿದಿದೆ.
ಹುಲುಗೇಶ, ಬಸವರಾಜ, ಪಡಿತರದಾರರು, ಕೊಟ್ಟೂರು.