Advertisement

ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

09:08 AM Jan 26, 2018 | Team Udayavani |

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧಿಸಿದಂತೆ ಕೆಲವೊಂದು ತಿದ್ದುಪಡಿ ಮಾಡಿ ಹೊಸ ವೇಳಾಪಟ್ಟಿ ಹಾಗೂ ಪರಿಷ್ಕೃತ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಪ್ರಕಟಿಸಿದೆ. 

Advertisement

ವರ್ಗಾವಣೆಗೆ ಅರ್ಜಿ ಸಲ್ಲಿಸಲು ಜ.30ರ ತನಕ ಅವಕಾಶ ನೀಡಲಾಗಿದೆ. ಫೆ.9ರೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಿದ ಮುದ್ರಿತ ಪ್ರತಿಯನ್ನು ಎಲ್ಲಾ ದಾಖಲೆಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಸಲ್ಲಿಸಬೇಕು. ಫೆ.17ರ ವರೆಗೆ ಅರ್ಜಿ ಪರಿಶೀಲನೆ ಹಾಗೂ ದೃಢೀಕರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಫೆ.19ರೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನು ದಾಖಲೆಗಳೊಂದಿಗೆ ಬಿಇಒಗಳೇ ಸಲ್ಲಿಸಬೇಕು. ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಫೆ.9ರಿಂದ ಏ.7ರ ತನಕ, ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಫೆ.22ರಿಂದ ಏ.12ರ ತನಕ ನಡೆಯಲಿದೆ. ಬಳಿಕ ಎಲ್ಲಾ ರೀತಿಯ ಕೌನ್ಸೆಲಿಂಗ್‌ ಪ್ರಕ್ರಿಯೆ ಏ.30ರೊಳಗೆ ಪೂರ್ಣಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ವೇಳಾಪಟ್ಟಿಯ  ಮೂಲಕ ಸ್ಪಷ್ಟಪಡಿಸಿದೆ.

ತಿದ್ದುಪಡಿಯೇನು?: ಯಾವುದೇ ತಾಲೂಕಿನಲ್ಲಿ ಮಂಜೂರಾದ ವೃಂದ ಬಲದ ಶೇ.20 ಖಾಲಿ ಇದ್ದರೆ ಹಾಗೂ ವರ್ಗಾವಣೆ ಕೋರುವ ಘಕಟದಲ್ಲಿ ಹೆಚ್ಚುವರಿ ಶಿಕ್ಷಕರಿದ್ದರೆ ವರ್ಗಾವಣೆಗೆ ಅವಕಾಶವಿಲ್ಲ. ಎ ವಲಯದಲ್ಲಿ 10 ವರ್ಷದ ಸೇವೆ ಪೂರೈಸಿದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ, ತಾಲೂಕು ಅಥವಾ ಜಿಲ್ಲಾ ಕೇಂದ್ರದ ಎ ವಲಯದಿಂದ ಎ ವಲಯಕ್ಕೆ ಕಡ್ಡಾಯ ವರ್ಗಾವಣೆ ಪಡೆಯಲು ಅವಕಾಶ ಇಲ್ಲ. ನಿವೃತ್ತಿಗೆ ಮೂರು ವರ್ಷಕ್ಕಿಂತ ಕಡಿಮೆ ಅವಧಿ ಇರುವ ಶಿಕ್ಷಕರು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಕೋರಿಕೆ ವರ್ಗಾವಣೆಯಲ್ಲಿ ದಂಪತಿ ಪ್ರಕರಣದಲ್ಲಿ ಘಟಕದ ಹೊರಗಿನ ವರ್ಗಾವಣೆಗಳಿಗೆ ಮಾತ್ರ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಗಿದೆ. ಪತಿ ಆಥವಾ ಪತ್ನಿ ಇಬ್ಬರಲ್ಲಿ ಒಬ್ಬರು ನೌಕರಾಗಿರುವ ಪ್ರಕರಣ ತೆಗೆದುಹಾಕಲಾಗಿದೆ.

ಪಿಯು ಉಪನ್ಯಾಸಕರ ವರ್ಗಾವಣೆಯ
ತಾತ್ಕಾಲಿಕ ವೇಳಾಪಟ್ಟಿ: ಸರ್ಕಾರಿ ಪಿಯು ಕಾಲೇಜಿನ ಅರ್ಹ ಪ್ರಾಧ್ಯಾಪಕರು ವರ್ಗಾವಣೆಗೆ ಫೆ.2ರ ತನಕ ಅರ್ಜಿ ಸಲ್ಲಿಸಬಹುದು. ಫೆ.6ರೊಳಗೆ ಅರ್ಜಿಯನ್ನು ದಾಖಲೆಗಳೊಂದಿಗೆ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಉಪನಿರ್ದೇಶಕರು ಅರ್ಜಿ ಸಮೇತ ದಾಖಲೆಗಳನ್ನು ಫೆ.10ರೊಳಗೆ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಅಂತಿಮ ಗಣಕೀಕೃತ ಕೌನ್ಸೆಲಿಂಗ್‌ ಮಾ. 3ರೊಳಗೆ ಮುಗಿಯಲಿದೆ ಎಂದು ಇಲಾಖೆ ತಿಳಿಸಿದೆ.

ಅರ್ಜಿ ಆಹ್ವಾನ
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಛಿಸುವ ಖಾಸಗಿ ಶಿಕ್ಷಣ ಸಂಸ್ಥೆ, ಟ್ರಸ್ಟ್‌ಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜ.31ರೊಳಗೆ ಹೆಸರು ನೋಂದಾಯಿಸಲು ಇಲಾಖೆಯ ಜಂಟಿ  ನಿರ್ದೇಶಕರು ತಿಳಿಸಿದ್ದಾರೆ. ಮಾಹಿತಿಗೆ www.pue.kar.nic.in  ಸಂಪರ್ಕಿಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next