ಬೆಂಗಳೂರು: ನಿಮಗೆ ತಾಕತ್ತಿದ್ದರೆ ಮುಂದಿನ ಮುಖ್ಯಮಂತ್ರಿ ಯಾರೆಂದು ಈಗಲೇ ಘೋಷಣೆ ಮಾಡಿ ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸವಾಲು ಹಾಕಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕಾಂಗ್ರೆಸ್ ನವರು ಸಿಎಂ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ. ಬಿಜೆಪಿಯವರು ಕೂಡ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿಲ್ಲ. ಕುಮಾರಸ್ವಾಮಿ ಅವರು ಸಿಎಂ ಅಭ್ಯರ್ಥಿ ಎಂದು ನಾವು ಹೇಳಿದ್ದೇವೆ. ನಿಮಗೆ ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಎಂದು ಹೇಳಿದರು.
ಸಿದ್ದರಾಮಯ್ಯನವರ ಕಾರ್ಯಕ್ರಮ ಹಾಳು ಮಾಡಲು ಹುನ್ನಾರ ನಡೆಸಿದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ. ಜನತಾ ದಳ ಅಸ್ತಿತ್ವದಲ್ಲಿ ಇಲ್ಲ ಅಂತೀರಿ, ಹಾಗಾದರೆ ನಮ್ಮ ಮೇಲೆ ಭಯ ಯಾಕೆ ಎಂದು ಪ್ರಶ್ನಿಸಿದ ಅವರು, ದೇವೇಗೌಡರ ಬಗ್ಗೆ ಮಾತನಾಡಿರುವ ರಾಜಣ್ಣನವರು ಕ್ಷಮೆ ಕೇಳುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರು ಉಲ್ಟಾ ಮಾತನಾಡಿದ್ದಾರೆ. ರಾಜಣ್ಣನವರು ಕ್ಷಮೆ ಕೇಳಬೇಕು. ನಾಳೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಪರೋಕ್ಷವಾಗಿ ರಾಜಣ್ಣನವರಿಗೆ ಎಚ್ಚರಿಕೆ ನೀಡಿದರು.
ನಾನು ರಿಯಾಕ್ಷನ್ ಮಾಡಿದ್ದಲ್ಲ, ರಾಜಣ್ಣನವರು ಕ್ಷಮೆ ಕೇಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಎಐಸಿಸಿ ವೇಣುಗೋಪಾಲ್ ಏನು ಹೇಳಿದ್ದಾರೆ ರಾಜಣ್ಣನವರೇ, ನಿಮಗೆ ನಾಲಗೆ ಇದೆ, ಮಾತನಾಡುತ್ತಿದ್ದೀರಿ. ಹತಾಶೆಯಿಂದ ಮಾತಾಡ್ತಿದ್ದೀರಿ. ಬಿಜೆಪಿಯ ಬಿ ಟೀಂ ಆಗಿ ಕೆಲಸ ಮಾಡುತ್ತಿರುವುದು ನೀವು. ಮೈಸೂರು ಬಿಜೆಪಿ ಮೇಯರ್, ಉಪ ಉಪಮೇಯರ್ ಕಾಂಗ್ರೆಸ್ ಇಲ್ಲವೇ. ದೇವೇಗೌಡ್ರು ಜಾತಿಯ ಸ್ವತ್ತು ಅಲ್ಲ, ಅವರು ದೇಶದ ಸ್ವತ್ತು ಎಂದು ರಾಜಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗೆ 110 ಕಡೆ ಅಭ್ಯರ್ಥಿ ಇಲ್ಲವೆಂದು ಅವರೇ ಒಪ್ಪಿಕೊಂಡಿದ್ದಾರೆ. ನಮ್ಮದು ಒಕ್ಕಲುತನ ಮಾಡುವ ಪಾರ್ಟಿ, ಬಡವರ ಪಾರ್ಟಿ ಎಂದು ಕಾಂಗ್ರೆಸ್ ಸಮೀಕ್ಷೆಗಳ ಬಗ್ಗೆ ವ್ಯಂಗ್ಯವಾಡಿದರು.
ಗುಬ್ಬಿ ವಾಸು ಅವರನ್ನು ಕಾಂಗ್ರೆಸ್‌ಗೆ ರಾಜಣ್ಣನವರು ಕರೆದುಕೊಂಡು ಹೋಗಿದ್ದಾರೆ. ಅವರು ರಾಜ್ಯಸಭೆಯಲ್ಲಿ ಬಿಜೆಪಿಗೆ ಮತ ಹಾಕಿದರು. ಇನ್ನು ಕೋಲಾರದ ಶ್ರೀನಿವಾಸಗೌಡರು ಕಾಂಗ್ರೆಸ್ ಗೆ ಮತ ಹಾಕಿಸಿಕೊಂಡಿದ್ದಿರಾ? ನೀವು ನಮಗೆ ಜಾತ್ಯತೀತಾದ ಬಗ್ಗೆ ಮಾತನಾಡುತ್ತೀರಾ ಎಂದು ವಾಗ್ದಾಳಿ ನಡೆಸಿದರು.
ರಾಜಣ್ಣನವರೇ ಇದನ್ನು ಮತ್ತೆ ಎಳೆದಾಡಿಕೊಂಡು ಹೋಗೊದು ಬೇಡಿ. ಕೈ ಮುಗಿದು ನಾನು ರಾಜಣ್ಣಗೆ ಹೇಳುತ್ತೇನೆ. ದಯವಿಟ್ಟು ಕ್ಷಮಾಪಣೆ ಕೇಳಿ. ಏನಾದರೂ ಆದರೆ ನಮ್ಮನ್ನು ಕೇಳುವುದಕ್ಕೆ ಬರಬೇಡಿ ಎಂದು ಎಚ್ಚರಿಕೆ ನೀಡಿದರು.