Advertisement

ಹಂಪಿ ಉತ್ಸವದ ದಿನಾಂಕ ಶೀಘ್ರ ಪ್ರಕಟಿಸಿ

04:45 PM Dec 04, 2018 | |

ಹಗರಿಬೊಮ್ಮನಹಳ್ಳಿ: ಹಂಪಿ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಶೀಘ್ರ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಜೇಸಿಐ ಸಂಸ್ಥೆಯ ಪದಾಧಿಕಾರಿಗಳು ತಹಶೀಲ್ದಾರ್‌ ಕೆ.ವಿಜಯಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜೇಸಿಐ ಸನ್‌ಫ್ಲವರ್‌ನ ನಿಯೋಜಿತ ಅಧ್ಯಕ್ಷ ಅಶೋಕ ಉಪ್ಪಾರ, ಬಳ್ಳಾರಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಂಪಿ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಶೀಘ್ರವೇ ನಿರ್ಧಾರ ಪ್ರಕಟಿಸಬೇಕು. ಬರದ ನೆಪವೊಡ್ಡಿ ಆಚರಣೆ ಕೈ ಬಿಡುವುದು ಸರಿಯಲ್ಲ. ಇಂತಹ ಹೇಳಿಕೆಯಿಂದ ಜಿಲ್ಲೆಯ ಜನತೆಗೆ ಬೇಸರ ಮೂಡಿಸಿದೆ. ಕೂಡಲೇ ಸರ್ಕಾರ ಹಂಪಿ ಉತ್ಸವ ನಡೆಸಲು ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರಕ್ಕೆ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಅಡ್ಡಿಯಾಗದ ಬರದ ಛಾಯೆ, ಹಂಪಿ ಉತ್ಸವ ಆಚರಣೆಗೆ ಏಕೆ? ಎಂದು ಪ್ರಶ್ನಿಸಿದ ಅವರು, ಈಚೇಗೆ ಕೊಡುಗು ಜಿಲ್ಲೆಗೆ ನೈಸರ್ಗಿಕ ವಿಕೋಪ ಉಂಟದಾಗ ಬಳ್ಳಾರಿ ಜಿಲ್ಲೆಯ ಜನತೆ ಲಕ್ಷಗಟ್ಟಲೇ ಹಣ ಹಾಗೂ ಗೃಹಪಯೋಗಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ಆರ್ಥಿಕ ಅಭಾವವಿದ್ದರೆ ನಿರ್ಧಾರ ಪ್ರಕಟಿಸಲಿ. ಬಳ್ಳಾರಿ ಜನತೆ ಹಣವನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. 

ಬಳ್ಳಾರಿ ಜನತೆ ಸ್ವಾಭಿಮಾನಿಗಳು, ಸರ್ಕಾರವನ್ನು ಬೇಡಿ ಹಂಪಿ ಉತ್ಸವ ನಡೆಸುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಚುನಾವಣೆಗಾಗಿ ಹಣ ಪೋಲು ಮಾಡಿದಾಗ ಬರದ ಬಗ್ಗೆ ಕಾಳಜಿ ಇರಲಿಲ್ಲ. ಐತಿಹಾಸಿಕ ಹಂಪಿ ಉತ್ಸವ ನಡೆಸಿ ಸಾಂಸ್ಕೃತಿಕ ವೈಭವವನ್ನು ಮೆರೆದು ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ನಿರಾಸಕ್ತಿ ತೋರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೇಸಿಐ ಸಂಸ್ಥೆಯ ಪೂರ್ವ ವಲಯಾಧ್ಯಕ್ಷ ಚಂದ್ರಾಮಪ್ಪ, ಘಟಕದ ಅಧ್ಯಕ್ಷ ಬ್ರಹ್ಮಾನಂದ ಗುತ್ತಲ್‌, ಕಾರ್ಯದರ್ಶಿ ವಿ.ಎಂ.ವಿಶಾಲ್‌, ಪೂರ್ವಾಧ್ಯಕ್ಷರಾದ ಅನಿಲ್‌ ಚಿದ್ರಿ, ಎಸ್‌.ವೀರಭದ್ರಪ್ಪ, ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಬೆಳ್ಳಕ್ಕಿ ರಾಮಣ್ಣ, ವೆಂಕಟೇಶ್‌ ಮರಡಿ, ಗೌತಮ್‌ ಧಾರಿವಾಲ್‌, ನರಪತ್‌ ಮೆಹತಾ, ಆರ್‌.ಕೇಶವರೆಡ್ಡಿ, ನಾಗರಾಜ ಸೋಡಾದ್‌, ಬಾರಿಕರ ಮಂಜುನಾಥ್‌, ನಟರಾಜ ಬಾದಾಮಿ, ಸದಸ್ಯರಾದ ಟಿ.ಜಿ.ನಾಗರಾಜ್‌, ಸಿದ್ದಲಿಂಗೇಶಯ್ಯ ಹಿರೇಮಠ, ಕೆ.ರುದ್ರೇಶ್‌, ರಾಹುಲ್‌ ವರ್ಣೇಕರ್‌, ಗುರುಬಸವರಾಜ್‌, ಶಿವಪುತ್ರ ಸೇರಿದಂತೆ ಇನ್ನಿತರರಿದ್ದರು.

Advertisement

ಹಂಪಿ ಉತ್ಸವ ಆಚರಣೆಗೆದೇಣಿಗೆ ಸಂಗ್ರಹಿಸಿ ಒತ್ತಾಯ
ಹೂವಿನಹಡಗಲಿ:
ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ರಾಜ್ಯ ಸರ್ಕಾರ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಮೀರಾಕೊರನಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರು ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ. ಪ್ರಕಾಶ್‌ ಅವರ ಭಾವಚಿತ್ರದೊಂದಿಗೆ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಶರಣಗೌಡ, ಹಂಪಿ ಉತ್ಸವ ರದ್ದುಗೊಳಿಸಲು ಬರಗಾಲದ ನೆಪ ಹೇಳಲಾಗುತ್ತಿದೆ. ಬರಗಾಲ ಘೋಷಣೆಯಾದಾಗ ಮೈಸೂರು ದಸರಾ ಉತ್ಸವ ನಡೆಸಲಿಲ್ಲವೇ. ಅದರಂತೆ ಹಂಪಿ ಉತ್ಸವವನ್ನು ಆಚರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಹಂಪಿ ಉತ್ಸವ ಹೈದ್ರಾಬಾದ್‌ ಕರ್ನಾಟಕ ಜನತೆಯ ಹೆಮ್ಮೆಯ ಸಂಕೇತವಾಗಿದೆ. ಮುಖ್ಯಮಂತ್ರಿಗಳು ಕೇವಲ ಹಾಸನ ಜಿಲ್ಲೆಗೆ ಸೀಮಿತರಲ್ಲ. ಉತ್ತರ ಕರ್ನಾಟಕವೂ ರಾಜ್ಯದಲ್ಲಿದೆ ಎನ್ನವುದನ್ನು ನೆನಪು ಮಾಡಿಕೊಳ್ಳಬೇಕು. ಕೂಡಲೇ ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಣೆಗೆ ದಿನಾಂಕ ಘೋಷಣೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ಮುಖಂಡ ಎಚ್‌.ಲಕ್ಕಪ್ಪ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಹಂಪಿ ಉತ್ಸವ ಆಚರಣೆ ಮಾಡಲು ಹಣ ಇಲ್ಲದಿದ್ದರೆ ತಾಲೂಕಿನಾದ್ಯಂತ ದೇಣಿಗೆ ಸಂಗ್ರಹಿಸುವ ಮೂಲಕ ಹಣ ಕೊಡುತ್ತೇವೆ. ದೇಣಿಗೆ ಹಣದಲ್ಲೇ ಉತ್ಸವ ಆಚರಿಸಿ ಎಂದು ಆಗ್ರಹಿಸಿದರು. ತಳಗದಳ್ಳಿ ಹನುಮಂತಪ್ಪ, ಐನಹಳ್ಳಿ ಬಸವರಾಜ್‌, ಎಚ್‌. ಬಸವರಾಜ್‌, ಹೇಮರೆಡ್ಡಿ, ಟಿ.ಹಾಲೇಶ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next