Advertisement

ಅತಿಥಿ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ

06:01 PM Sep 02, 2020 | Suhan S |

ರಾಯಚೂರು: ಕೋವಿಡ್ ಲಾಕ್‌ಡೌನ್‌ನಿಂದ  ವೇತನವಿಲ್ಲದೇ ಸಂಕಷ್ಟ ಸಿಲುಕಿದ ಅತಿಥಿ ಶಿಕ್ಷಕರ ನೆರವಿಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು, ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಶಿಕ್ಷಕರ ಹೋರಾಟ ಸಮಿತಿ, ಅಖೀಲ ಭಾರತ ಶಿಕ್ಷಣ ಉಳಿಸಿ ರಾಜ್ಯ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

Advertisement

ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ಕಳೆದ ಐದು ತಿಂಗಳಿಂದ ವೇತನವಿಲ್ಲದೇ ಅತಿಥಿ ಶಿಕ್ಷಕರು ಸಾಕಷ್ಟು ಸಮಸ್ಯೆಗೆ ತುತ್ತಾಗಿದ್ದಾರೆ. ಮನೆ ನಡೆಸಲಾಗದ ಸ್ಥಿತಿಗೆ ಬಂದಿದ್ದು, ಬೇರೆ ಬೇರೆ ಕೆಲಸ ಮಾಡಿಕೊಂಡು ಜೀವನ ದೂಡುವ ಸನ್ನಿವೇಶ ಏರ್ಪಟ್ಟಿದೆ. ಇಂಥ ವೇಳೆ ಸರ್ಕಾರ ಅವರ ನೆರವಿಗೆ ಬರಬೇಕಿದೆ. ಮುಂದೆ ನಡೆಸುವ ಎಲ್ಲ ನೇಮಕಾತಿಗಳಲ್ಲಿ ಅತಿಥಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಬೇಕು. ಅತಿಥಿ ಶಿಕ್ಷಕರನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಕಾಯಂ ಹುದ್ದೆಗಳಿಗೆ ನೇಮಿಸಬೇಕು ಎಂದು ಒತ್ತಾಯಿಸಿದರು.

ಅತಿಥಿ ಶಿಕ್ಷಕರಿಗೆ ನಿರ್ದಿಷ್ಟ ಕೋಟಾ ಕಾಯ್ದಿರಿಸಬೇಕು, ವಿಶೇಷ ಅಂಕ ನೀಡುವ ಹಾಗೂ ವಯೋಮಿತಿ ಹೆಚ್ಚಿಸುವ ಹಾಗೂ ಪ್ರಜಾತಾಂತ್ರಿಕ ಪದ್ಧತಿ ಜಾರಿಗೊಳಿಸುವ ನಿರ್ಧಾರ ತಕ್ಷಣವೇ ಸಚಿವ ಸಂಪುಟದಲ್ಲಿ ನಿರ್ಧರಿಸಬೇಕು. ಅತಿಥಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಸೇವೆಯಿಂದ ಕೈ ಬಿಡದಂತೆ ಸರ್ಕಾರವೇ ಸುತ್ತೋಲೆ ಹೊರಡಿಸಬೇಕು ಎಂದರು.

ವೇತನ ಹೆಚ್ಚಿಸುವುದಲ್ಲದೇ ವರ್ಷವಿಡೀ ನೀಡುವಂತೆ ಆದೇಶಿಸಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲೇ ವೇತನ ಪಾವತಿಸಬೇಕು, ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರ ನೀಡಬೇಕು, ಗುರುತಿನ ಚೀಟಿ ಕೊಡಬೇಕು, ಎಲ್ಲ ಅತಿಥಿ ಶಿಕ್ಷಕರಿಗೆ ಪಿಎಫ್‌ ಮತ್ತು ಇಎಸ್‌ಐ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಂಘಟನೆ ಸಂಚಾಲಕ ಭರತ್‌ ಕುಮಾರ್‌, ಮಲ್ಲೇಶ, ನಾಗರಾಜ, ದಶವಂತ, ಶರಣ ಬಸವ, ಗಂಗಾಧರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next