Advertisement

ಒತ್ತುವರಿ ತೆರವು ವರದಿ ಸಲ್ಲಿಸಿದ ಪಾಲಿಕೆ

12:37 AM Apr 04, 2019 | Team Udayavani |

ಬೆಂಗಳೂರು: ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿನ ಒತ್ತುವರಿ, ಅಕ್ರಮ ಮಳಿಗೆಗಳ ತೆರವು ಕಾರ್ಯಾಚರಣೆಯ ಪ್ರಗತಿ ವರದಿಯನ್ನು ಬಿಬಿಎಂಪಿ ಬುಧವಾರ ಹೈಕೋರ್ಟ್‌ಗೆ ಸಲ್ಲಿಸಿದೆ.

Advertisement

ಕೆ.ಆರ್‌.ಮಾರುಕಟ್ಟೆ ಸಂಕೀರ್ಣದ ಅಗ್ನಿ ಅನಾಹುತ ತುರ್ತು ನಿರ್ಗಮನದ ಸ್ಥಳ ಮತ್ತು ಸಾರ್ವಜನಿಕ ಪ್ರಾಂಗಣದಲ್ಲಿ ನಿರ್ಮಿಸಿರುವ ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವಂತೆ ಕೋರಿ ಬೆಂಗಳೂರು ಹೂ ವ್ಯಾಪಾರಿಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ.ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಬಿಬಿಎಂಪಿ ಈ ಪ್ರಗತಿ ವರದಿ ಸಲ್ಲಿಸಿದೆ.

ವಿಚಾರಣೆ ವೇಳೆ, ತೆರವು ಕಾರ್ಯಾಚರಣೆ ಕುರಿತು ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೀಡಿರುವ ಪ್ರಗತಿ ವರದಿಯನ್ನು ಬಿಬಿಎಂಪಿ ಪರ ವಕೀಲರು ಪ್ರಮಾಣಪತ್ರದ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು.

ಕೆ.ಆರ್‌.ಮಾರುಕಟ್ಟೆಯಲ್ಲಿರುವ ಎಲ್ಲ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಅಗ್ನಿಶಾಮಕ ಇಲಾಖೆಯ ನಿರ್ದೇಶನದಂತೆ ಮಾರುಕಟ್ಟೆಯ ಎಲ್ಲ ರಸ್ತೆಗಳನ್ನು 8 ಮೀಟರ್‌ನಷ್ಟು ತೆರವುಗೊಳಿಸಲಾಗಿದ್ದು, ಅಗ್ನಿಶಾಮಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಚಿಕ್ಕಪೇಟೆ ಮೆಟ್ರೋ ನಿಲ್ದಾಣದಿಂದ ಕೆ.ಆರ್‌. ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಅಕ್ರಮ ಒತ್ತುವರಿಗಳನ್ನು ತೆರವು ಮಾಡಲಾಗಿದ್ದು, ಇನ್ನು ಮುಂದೆ ಯಾವುದೇ ಒತ್ತುವರಿಗೆ ಬಿಬಿಎಂಪಿ ಅವಕಾಶ ನೀಡುವುದಿಲ್ಲ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

Advertisement

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಬಿಬಿಎಂಪಿ ಕೇವಲ ಪಾದಚಾರಿ ಮಾರ್ಗದಲ್ಲಿದ್ದ ಒತ್ತುವರಿ ತೆರವುಗೊಳಿಸಿದೆ. ಆದರೆ, ಅಕ್ರಮವಾಗಿ ನಿರ್ಮಿಸಲಾಗಿರುವ ಮಳಿಗೆಗಳನ್ನು ತೆರವುಗೊಳಿಸಿಲ್ಲ ಎಂದು ದೂರಿದರು.

ವಾದ ಆಲಿಸಿದ ನ್ಯಾಯಪೀಠ, ಬಿಬಿಎಂಪಿ ಕಾರ್ಯಾಚರಣೆ ತೃಪ್ತಿಕರವಾಗಿದೆಯೇ ಎಂಬ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಗ್ನಿ ಶಾಮಕ ಇಲಾಖೆಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಏ.9ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next