Advertisement

ಅಣ್ಣೇಗೌಡ ಬಿಲ್ಡಿಂಗ್‌ ಇನ್ನು ನೆನಪು ಮಾತ್ರ!

12:45 PM Jan 01, 2023 | Team Udayavani |

ಚನ್ನಪಟ್ಟಣ: ಪ್ರತಿನಿತ್ಯ ನೂರಾರು ಜನರು ವ್ಯಾಪಾರ, ವಹಿವಾಟಿಗಾಗಿ ಭೇಟಿ ನೀಡುವ ನಗರದ ಹೃದಯಭಾಗ ಎಂ.ಜಿ. ರಸ್ತೆಯಲ್ಲಿರುವ ಅಣೇಗೌಡ ಬಿಲ್ಡಿಂಗ್‌ (ವಾಣಿಜ್ಯ ಸಮುಚ್ಚಯ) ಇನ್ನೂ ನೆನಪು ಮಾತ್ರ. ಪೊಲೀಸ್‌ ಸರ್ಪಗಾವಲಿನಲ್ಲಿ ಶನಿವಾರ ನಗರಸಭೆ ಸಿಬ್ಬಂದಿ ವರ್ಗದವರು ಈ ಐತಿಹಾಸಿಕ ಕಟ್ಟಡವನ್ನು ಜೆಸಿಬಿಯಿಂದ ನೆಲಸಮ ಮಾಡುವ ಕಾರ್ಯಕ್ಕೆ ಕೈ ಹಾಕಲಾಯಿತು.

Advertisement

ಈ ಕಟ್ಟಡ ನೂರು ವರ್ಷಗಳಿಗೂ ಹಳೆಯದಾಗಿದ್ದು, ನಗರದ ಪ್ರಮುಖ ಜನನಿಬಿಡ ಪ್ರದೇಶದಲ್ಲಿದೆ. ಚನ್ನಪಟ್ಟಣದ ಮೊದಲ ವಾಣಿಜ್ಯ ಸಮುಚ್ಚಯ ಎಂಬ ಹೆಗ್ಗಳಿಕೆ ಹೊಂದಿತ್ತು. ಈ ಹಿಂದೆ ಈ ಕಟ್ಟಡದಲ್ಲಿ ಇದ್ದ ಕಾರಣ, ಆಗಿನ ಕಾಲದಲ್ಲೇ ವಾಣಿಜ್ಯ ಚಟುವಟಿಕೆಗೂ ರಹದಾರಿಯಾಗಿತ್ತು. ಆಗಿನ ಮೈಸೂರು ಮಹಾರಾಜರು ಬೆಂಗಳೂರಿಗೆ ಸಾಗುವಾಗ ಅದೆಷ್ಟೋ ಬಾರಿ ಇಲ್ಲಿನ ಹೋಟೆಲ್‌ ನಲ್ಲಿ ತಿಂಡಿ- ಕಾಫಿ ಮಾಡಿ ಉದಾಹರಣೆ ಸಾಕಷ್ಟಿವೆ. ಈ ನಿಟ್ಟಿನಲ್ಲಿ ಈ ಹೊಟೇಲ್‌ ಅನ್ನು ಮೈಸೂರು ಹೊಟೇಲ್‌ ಎಂದು ಕರೆಯಲಾಗುತ್ತಿತ್ತು ಎಂದು ಇಲ್ಲಿನ ಒಡನಾಟ ಇಟ್ಟುಕೊಂಡಿದ್ದ ಹಿರಿಯ ಚೇತನಗಳು ಪುಳಕದಿಂದ ನೆನಪಿನ ಬುತ್ತಿ ಬಿಚ್ಚುತ್ತಾರೆ.

ಮೊದಲ ವಾಣಿಜ್ಯ ಸಮುಚ್ಚಯ: ಎರಡು ಅಂತಸ್ತಿನ ವಿಶಾಲವಾದ ಜಾಗದಲ್ಲಿರುವ ಈ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದ ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿತ್ತು.

ಮೊಟ್ಟಮೊದಲ ಸಮುಚ್ಚಯ: ಮದ್ದೂರು ತಾಲೂಕಿನ ನಿಡಘಟ್ಟದ ಗ್ರಾಮದ ಅಣ್ಣೇಗೌಡರು ನಗರದ ಹೃದಯಭಾಗದಲ್ಲಿ ನಿರ್ಮಿಸಿದ ಈ ವಾಣಿಜ್ಯ ಕಟ್ಟಡ ಅಂದಿನ ಕಾಲಕ್ಕೆ ಬಹು ಆಕರ್ಷಕ ಕಟ್ಟಡವಾಗಿತ್ತು. ಅಲ್ಲದೆ, ನಗರದ ಮೊಟ್ಟಮೊದಲ ವಾಣಿಜ್ಯ ಸಮುಚ್ಚಯವಾಗಿತ್ತು. ಎರಡು ಅಂತಸ್ತಿನ ಈ ವಾಣಿಜ್ಯ ಸಮುಚ್ಚಯದಲ್ಲಿ ಹತ್ತಾರು ಅಂಗಡಿಗಳಿದ್ದು, ಹಲವು ವರ್ಷಗಳ ಹಿಂದೆಯೇ ಮೇಲಂತಸ್ತಿನ ಭಾಗ ಚಟುವಟಿಕೆಯಿಲ್ಲದೆ ಕಾರ್ಯ ಸ್ಥಗಿತಗೊಳಿಸಿತ್ತು. ಕೆಳ ಅಂತಸ್ತು ಸಹ ಶಿಥಿಲಗೊಂಡಿತ್ತು. ಕೆಳ ಅಂತಸ್ತಿನಲ್ಲಿ ಹತ್ತಾರು ಅಂಗಡಿ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಮೇಲಾºಗದಲ್ಲಿ ಕುಸಿದಿರುವ ಅವಶೇಷಗಳ ಕೆಳಗೆ ಶಿಥಿಲಗೊಂಡಿರುವ ಅಂಗಡಿಗಳಲ್ಲಿಯೇ ಕೆಲ ವರ್ತಕರು ವ್ಯಾಪಾರ ನಡೆಸುತ್ತಿದ್ದರು.

ವ್ಯಾಜ್ಯವೇ ಕಾರಣ: ಕಟ್ಟಡ ಶಿಥಿಲಾವಸ್ಥೆ ತಲುಪಲು ಮಾಲೀಕರು ಮತ್ತು ಅಂಗಡಿ ಮಾಲೀಕರ ನಡುವೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯವೇ ಕಾರಣವಾಗಿದೆ. ಬಾಡಿಗೆ ಕರಾರು ಸೇರಿ ಇನ್ನಿತರ ವಿಷಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಸಮುಚ್ಚಯದ ಮಾಲೀಕರು ಈ ಕಟ್ಟಡವನ್ನು ಕೆಡವಲು ಮುಂದಾಗಿದ್ದರು. ಆದರೆ, ಅಂಗಡಿ ಬಿಟ್ಟುಕೊಡಲು ನಿರಾಕರಿಸಿ ಶಿಥಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ವ್ಯಾಪಾರ ಮುಂದುವರಿಸಿರುವ ವರ್ತಕರು ಅಂಗಡಿ ಖಾಲಿ ಮಾಡದಿರುವುದು ತೊಡಕಾಗಿತ್ತು ಎಂದು ವಿಶ್ಲೇಷಣೆ ನಡೆದಿತ್ತು.

Advertisement

-ತಿರುಮಲೆ ಶ್ರೀನಿವಾಸ್‌ 

Advertisement

Udayavani is now on Telegram. Click here to join our channel and stay updated with the latest news.

Next