ಬೆಳಗಾವಿ: ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ಹುಲಿ ಪ್ರಕಾಶ ಹುಕ್ಕೇರಿಗೆ ತೀವ್ರ ಆಘಾತ ನೀಡಿ ಬಿಜೆಪಿಯ ಹೊಸಮುಖ ಅಣ್ಣಾಸಾಹೇಬ ಜೊಲ್ಲೆ ಮೊದಲ ಬಾರಿಗೆ ಸಂಸತ್ ಮೆಟ್ಟಿಲು ಹತ್ತಿದ್ದಾರೆ.
ಟಿಕೆಟ್ ಹಂಚಿಕೆ ವಿಷಯದಲ್ಲಿ ಸಾಕಷ್ಟು ಆತಂಕ ಎದುರಿಸಿ ಸಫಲರಾಗಿದ್ದ ಜೊಲ್ಲೆ ಚುನಾವಣೆಯ ಫಲಿತಾಂಶದಲ್ಲಿ ಒಮ್ಮೆಯೂ ಹಿಂದೆ ನೋಡಲಿಲ್ಲ. ತುರುಸಿನ ಸ್ಪರ್ಧೆ ನಡೆಯಬಹುದು ಎಂದು ನಿರೀಕ್ಷೆ ಹುಸಿ ಮಾಡಿ ಹುಕ್ಕೇರಿ ಕುಟುಂಬದ ವಿರುದ್ಧದ ವಿಧಾನಸಭೆ ಚುನಾವಣೆಯ ಸೋಲಿನ ಸೇಡು ತೀರಿಸಿಕೊಂಡರು. ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ ಪ್ರಕಾಶ ಹುಕ್ಕೇರಿಗೆ ಭಾರಿ ಮುಳುವಾಯಿತು. ಸದಾ ವೈಯಕ್ತಿಕ ವರ್ಚಸ್ಸು ಹಾಗೂ ಹೊಂದಾಣಿಕೆ ರಾಜಕಾರಣದಿಂದ ಸುದ್ದಿ ಮಾಡುವ ಚಿಕ್ಕೋಡಿಯಲ್ಲಿ ಈ ಬಾರಿ ಹೊಂದಾಣಿಕೆಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಕೆಲಸ ಮಾಡಿತು.
ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಪ್ರಚಾರ ಕೂಡ ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರಿತು ಎನ್ನುವುದಕ್ಕೆ ಫಲಿತಾಂಶವೇ ಸಾಕ್ಷಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ವಿರುದ್ಧ ಸೋಲು ಅನುಭವಿಸಿದ್ದ ಅಣ್ಣಾಸಾಹೇಬ ಜೊಲ್ಲೆಗೆ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯೊಂದಿಗೆ ಕಾಂಗ್ರೆಸ್ ಭಿನ್ನಮತ ಸಾಕಷ್ಟು ನೆರವಿಗೆ ಬಂದಿತು. ಬಿಜೆಪಿಯವರೇ ಆದ ಮಾಜಿ ಸಂಸದ ರಮೇಶ ಕತ್ತಿ ತಮಗೆ ಟಿಕೆಟ್ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದರೂ ಮೋದಿ ಅಲೆಯ ಮುಂದೆ ಇದು ಗೌಣವಾಯಿತು.
ಕಳೆದ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದ ಸ್ಪರ್ಧೆ ಮಾಡಿ ಬಿಜೆಪಿಯಲ್ಲಿನ ಭಿನ್ನಮತದ ಲಾಭ ಪಡೆದು ಮೊದಲ ಬಾರಿಗೆ ಸಂಸತ್ ಮೆಟ್ಟಲು ಹತ್ತಿದ್ದ ಪ್ರಕಾಶ ಹುಕ್ಕೇರಿ ಈ ಬಾರಿ ಪಕ್ಷದೊಳಗಿನ ಅಸಮಾಧಾನ ಹಾಗೂ ಮಾಜಿ ಶಾಸಕರ ಅಸಹಕಾರದಿಂದ ಸೋಲಿನ ಪೆಟ್ಟು ತಿಂದರು.
2014ರ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ವರ್ಚಸ್ಸಿನ ಮೇಲೆ ಜಯ ಸಾಧಿಸಿದ್ದ ಪ್ರಕಾಶ ಹುಕ್ಕೇರಿಗೆ ಈ ಬಾರಿ ಅದು ನೆರವಿಗೆ ಬರಲಿಲ್ಲ. ರಾಹುಲ್ ಗಾಂಧಿ ಇಲ್ಲಿಗೆ ಬಂದು ಪ್ರಚಾರ ಮಾಡಿದರೂ ಪರಿಣಾಮ ಬೀರಲಿಲ್ಲ. ಜೊತೆಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ರಮೇಶ ಜಾರಕಿಹೊಳಿ ಸಹ ಇಲ್ಲಿ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದು ಪ್ರಕಾಶ ಹುಕ್ಕೇರಿಗೆ ಮುಳುವಾಯಿತು. ಕಳೆದ ಚುನಾವಣೆಯಲ್ಲಿ 3003 ಅಲ್ಪಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಅವರನ್ನು ಸೋಲಿಸಿದ್ದ ಪ್ರಕಾಶ ಹುಕ್ಕೇರಿ ಈ ಬಾರಿ ಜೊಲ್ಲೆ ವಿರುದ್ಧ ಭಾರೀ ಅಂತರದಿಂದ ಸೋಲು ಅನುಭವಿಸಿದರು.
ಕ್ಷೇತ್ರದ ಜನರ ಆಶೀರ್ವಾದಕ್ಕೆ ನಾನು ಚಿರಋಣಿ. ಸೋತವರು ಗೆಲ್ಲಲೇಬೇಕು. ಅದೇ ರೀತಿ ಗೆದ್ದವರು ಸೋಲಲೇಬೇಕು. ನನ್ನ ಗೆಲುವಿಗೆ ಎಲ್ಲರ ಶ್ರಮ ಕಾರಣ.
– ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಕ್ಕೋಡಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದಿಟಛಿ ಮಾಡಿದ್ದರಿಂದ ನಾನು ಜಯದ ನಿರೀಕ್ಷೆ ಮಾಡಿದ್ದೆ. ಒಟ್ಟಾರೆ ಇಂದು ಬಂದ ಮತದಾರರ ತೀರ್ಪಿಗೆ ನಾನು ಬದ್ಧ.
– ಪ್ರಕಾಶ ಹುಕ್ಕೇರಿ, ಕಾಂಗ್ರೆಸ್ ಪರಾಜಿತ
ಅಭ್ಯರ್ಥಿ