ಟೊರಾಂಟೊ: 100 ವರ್ಷಗಳ ಹಿಂದೆ ವಾರಾಣಸಿಯಿಂದ ಕಳವಾಗಿದ್ದ ಅನ್ನಪೂರ್ಣ ದೇವಿ ವಿಗ್ರಹವನ್ನು ಮರಳಿಸಲು ಕೆನಡಾದ ವಿವಿಯೊಂದು ಮುಂದಾಗಿದೆ. ಶತಮಾನಗಳ ಹಿಂದೆ ಕಾಶಿಯ ದೇಗುಲವೊಂದರಿಂದ ಕಣ್ಮರೆಯಾಗಿದ್ದ ಈ ವಿಗ್ರಹ, 1936ರಲ್ಲಿ ಕೆನಡಾದ ರೆಜಿನಾ ವಿವಿಯ ಮೆಕೆನಿ ಆರ್ಟ್ ಗ್ಯಾಲರಿ ಸೇರಿತ್ತು. ಆದರೆ ಇದು ಕಳುವಾದ ವಿಗ್ರಹವೆನ್ನುವ ಸಂಗತಿ ಗ್ಯಾಲರಿಯವರ ಗಮನಕ್ಕೆ ಬಂದಿರಲಿಲ್ಲ.
ಕಲಾವಿದೆ ದಿವ್ಯಾ ಮೆಹ್ರಾ ಎಂಬವರು ವಿಗ್ರಹದ ನಿಖರ ಹಿನ್ನೆಲೆಯನ್ನು ಮೆಕೆಂಝಿ ಗ್ಯಾಲರಿಯವರ ಗಮನಕ್ಕೆ ತಂದಿದ್ದರು. ವಿವಿಯ ಉಪಕುಲಪತಿ ಡಾ| ಥಾಮಸ್ ಚೇಸ್ ಅವರು ಕೆನಡಾದಲ್ಲಿನ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಅವರೊಂದಿಗೆ ನ.19ರಂದು ವರ್ಚುವಲ್ ಸಭೆ ನಡೆಸಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ್ದರು.
“ಅತೀ ಅಪರೂಪದ ಪ್ರಾಚೀನ ಅನ್ನಪೂರ್ಣ ದೇವಿಯ ವಿಗ್ರಹ ಮರಳಿ ಭಾರತದ ಹಾದಿ ಹಿಡಿದಿರುವುದು ನಮಗೆ ಸಂತಸದ ಸಂಗತಿ. ವಿಗ್ರಹ ಹಸ್ತಾಂತರಕ್ಕೆ ಸಕಲ ತಯಾರಿ ಆರಂಭಿಸಿರುವ ರೆಜಿನಾ ವಿವಿಗೆ ನಾವು ಆಭಾರಿ’ ಎಂದು ಬಿಸಾರಿಯಾ
ಕೃತಜ್ಞತೆ ಸಮರ್ಪಿಸಿದ್ದಾರೆ.