Advertisement

ನಂಜುಂಡನ ಅನ್ನದಾನ

07:22 PM Nov 29, 2019 | Lakshmi GovindaRaj |

“ದಕ್ಷಿಣದ ಕಾಶಿ’ ಅಂತಲೇ ಖ್ಯಾತಿವೆತ್ತ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರನ ಸನ್ನಿಧಾನ, ಹಳೇ ಮೈಸೂರಿನ ಪ್ರಮುಖ ಧಾರ್ಮಿಕ ಕ್ಷೇತ್ರ. ಕಪಿಲಾ ತೀರದ ದೇಗುಲದ ದಾಸೋಹ ಹೊಸತೂ ಅಲ್ಲ, ಹಳತೂ ಅಲ್ಲ. ಮೈಸೂರು ಮಹಾರಾಜರ ಕಾಲದಲ್ಲಿಯೇ ಇಲ್ಲಿ ಸದ್ಭಕ್ತರಿಗೆ ಊಟ ನೀಡಲಾಗುತ್ತಿತ್ತು. ಆಗ ಇದ್ದ “ಶಿವಕೂಟ’ದಲ್ಲಿ ನಿತ್ಯ ದಾಸೋಹ ಒಂದು ಸಂಭ್ರಮದಂತೆ ಏರ್ಪಡುತ್ತಿತ್ತು.

Advertisement

ಕಾಲಕ್ರಮೇಣ ನಿಂತಿದ್ದ ದಾಸೋಹವನ್ನು ಬೆಂಕಿ ಮಹದೇವು ಅವರು ಸಚಿವರಾಗಿದ್ದಾಗ ಕಾಳಜಿ ವಹಿಸಿ ಮುಂದುವರಿಸಿದ್ದರು. ಭಕ್ತಾದಿಗಳ ನೆರವೂ ಇದಕ್ಕೆ ಸಿಕ್ಕಿತ್ತು. 2005ರಲ್ಲಿ ಬೃಹತ್‌ ದಾಸೋಹ ಭವನ ತಲೆಯೆತ್ತಿತು. ಅಲ್ಲಿಯ ತನಕ ಭಕ್ತರಿಗೆ ಚಿತ್ರಾನ್ನ, ಪುಳಿಯೊಗರೆ, ವಾಂಗೀಬಾತ್‌ ಮುಂತಾದ ಲಘು ಉಪಾಹಾರಗಳನ್ನು ದೊನ್ನೆಗಳಲ್ಲಿ ನೀಡಲಾಗುತ್ತಿತ್ತು.

ನಿತ್ಯ ದಾಸೋಹ…: 2008ರಲ್ಲಿ ಕೃಷ್ಣಯ್ಯ ಶೆಟ್ಟಿ ಅವರು ಮುಜರಾಯಿ ಸಚಿವರಾಗಿದ್ದಾಗ, ಇಲ್ಲಿನ “ನಿತ್ಯ ದಾಸೋಹ’ಕ್ಕೆ ಚಾಲನೆ ದೊರಕಿತು. ಪ್ರತಿನಿತ್ಯ ಕನಿಷ್ಠ 2-3 ಸಾವಿರ ಮಂದಿ ಇಲ್ಲಿ ಪ್ರಸಾದ ಭೋಜನ ಸವಿಯುತ್ತಾರೆ. ಕಾರ್ತೀಕ ಸೋಮವಾರ, ಪೌರ್ಣಮಿಗಳಂದು ಭಕ್ತರ ಸಂಖ್ಯೆ 10-15 ಸಾವಿರ ದಾಟುತ್ತದೆ. ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಂ. ರವೀಂದ್ರ ಅವರ ಮಾರ್ಗದರ್ಶನದಲ್ಲಿ ಶಿಸ್ತಿನ ಅಡುಗೆ ವ್ಯವಸ್ಥೆಯನ್ನು ಕಾಣಬಹುದು.

ಶುಚಿಗೆ- ರುಚಿಗೆ ಆದ್ಯತೆ: ಹಸಿದು ಬಂದ ಸದ್ಭಕ್ತರಿಗೆ ಶುಚಿ, ರುಚಿಯಾಗಿ ಅನ್ನಪ್ರಸಾದ ನೀಡುವುದೂ ಒಂದು ಸವಾಲು. ಅದನ್ನು ಇಲ್ಲಿನ ಪಾಕಶಾಲೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ದಾಸೋಹ ಭವನದ ಕೆಳ ಹಾಲ್‌ನಲ್ಲಿ ಏಕಕಾಲಕ್ಕೆ ಐನೂರಕ್ಕೂ ಹೆಚ್ಚು ಜನರು ಕುಳಿತು ಭೋಜನ ಸವಿಯಬಹುದು. ಭೋಜನ ಸಿದ್ಧಪಡಿಸಲು ಗುತ್ತಿಗೆ ನೀಡಲಾಗಿದೆ. ಬಾಣಸಿಗರು ಹಾಗೂ ಸ್ವತ್ಛತಾ ಸಿಬ್ಬಂದಿ ಸೇರಿ, 24 ಮಂದಿ ನಿತ್ಯದ ದಾಸೋಹಕ್ಕಾಗಿ ಶ್ರಮವಹಿಸುತ್ತಾರೆ.

ಭೋಜನ ವಿಶೇಷ
– ಅನ್ನ, ರಸಂ, ಸಾಂಬಾರು, ಕಾಳಿನ ಪಲ್ಯ ಅಥವಾ ತರಕಾರಿ ಪಲ್ಯ, ಉಪ್ಪಿನಕಾಯಿ, ಮಜ್ಜಿಗೆ, ಪಾಯಸ.
– ವಿಶೇಷ ದಿನಗಳಲ್ಲಿ ವಿವಿಧ ಸಿಹಿ ಭಕ್ಷ್ಯಗಳು, ಕೋಸಂಬರಿ, ಪುಳಿಯೊಗರೆ ಅಥವಾ ಚಿತ್ರಾನ್ನ, ತರಕಾರಿ ಪಲ್ಯ.
– ಹರಕೆ ದಾನದ ರೂಪದಲ್ಲಿ ಬೆಲ್ಲ ಸಾಕಷ್ಟು ಬರುವುದರಿಂದ, ಬೆಲ್ಲದ ಪಾಯಸ ಇಲ್ಲಿನ ವಿಶೇಷ.
– ವಿಐಪಿಗಳಿಗೆ ಮಹಡಿ ಹಾಲ್‌ನಲ್ಲಿ ಟೇಬಲ್‌ ಊಟದ ವ್ಯವಸ್ಥೆ.

Advertisement

ಊಟದ ಸಮಯ
– ಮಧ್ಯಾಹ್ನ 12.30- 2.30 ಗಂಟೆವರೆಗೆ
– ರಾ.7- 9 ಗಂಟೆವರೆಗೆ

ಅನ್ನದಾನ, ಶ್ರೇಷ್ಠದಾನ
– ದಾಸೋಹಕ್ಕೆ ಖರ್ಚಾಗುವ ಶೇ.40ರಷ್ಟನ್ನು ದಾನಿಗಳಿಂದ ಸೇವಾ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.
– ಅಕ್ಕಿ, ಬೆಲ್ಲ, ಎಣ್ಣೆ, ಬೇಳೆಗಳು ದಾನದ ರೂಪದಲ್ಲಿಯೇ ಬರುತ್ತವೆ.
– ದಾಸೋಹ ಭವನದ ಹುಂಡಿಯಲ್ಲಿ ವಾರ್ಷಿಕವಾಗಿ 50 ಲಕ್ಷ ರೂ. ಸಂಗ್ರಹಗೊಳ್ಳುತ್ತದೆ.
– ದಾಸೋಹದಿಂದ ದೇಗುಲಕ್ಕೆ ಲಾಭವೇ ಹೆಚ್ಚು ಎನ್ನುತ್ತಾರೆ, ಇಲ್ಲಿನ ಅಧಿಕಾರಿಗಳು.

ಸಂಖ್ಯಾ ಸೋಜಿಗ
24- ಸಿಬ್ಬಂದಿ ಪಾಕಶಾಲೆಗೆ ದುಡಿಯುತ್ತಾರೆ
40- ಶೇಕಡಾ ದಾನದಿಂದಲೇ ಅಡುಗೆ ನಿರ್ವಹಣೆ
2005- ಇಸವಿಯಲ್ಲಿ ಭೋಜನಶಾಲೆ ಸ್ಥಾಪನೆ
3000- ಮಂದಿಗೆ ನಿತ್ಯ ಅನ್ನದಾನ
9,735- ರೂ.ಗಳು, ನಿತ್ಯದ ಅಡುಗೆ ವೆಚ್ಚ
50000- ಭಕ್ತರಿಗೆ ಅಡುಗೆ ಮಾಡಬಲ್ಲ ವ್ಯವಸ್ಥೆ

* ಶ್ರೀಧರ ಭಟ್‌, ನಂಜನಗೂಡು

Advertisement

Udayavani is now on Telegram. Click here to join our channel and stay updated with the latest news.

Next