ನವದೆಹಲಿ: ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನದಲ್ಲಿ ಬಿಜೆಪಿ 73 ಸ್ಥಾನಗಳನ್ನು ಹೊಂದಿರುವುದರಿಂದ ಅಣ್ಣಾಮಲೈ ಅವರು ಅನಾಯಾಸವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಈ ಮೂಲಕ ರಾಜಸ್ಯಭೆಯಲ್ಲಿ ಬಿಜೆಪಿಗೆ ಮತ್ತೂಂದು ದನಿ ಸಿಗಲಿದೆ.
ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರನ್ನು ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ ನಂತರ, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸಕ್ರಿಯವಾಗಿದೆ.
ಮುಂದಿನ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಬ್ರಿಕ್ಸ್ ಶೃಂಗಸಭೆಗೆ ತೆರಳುವ ಬಿಜೆಪಿಯ ನಾಲ್ವರ ನಿಯೋಗದಲ್ಲಿ ಅಣ್ಣಾಮಲೈ ಕೂಡ ಒಬ್ಬರು. ಅಲ್ಲದೇ ಜು.28ರಿಂದ ಅವರು ತಮಿಳುನಾಡಿನಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಗೆ ರಾಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಡಿಎಂಕೆ ಸುಳ್ಳು ಅಭಿಯಾನ:
“ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಸಮಾನ ನಾಗರಿಕ ಸಂಹಿತೆ(ಯುಸಿಸಿ) ಕುರಿತು ಹಾಗೂ ಜಿಎಸ್‌ಟಿ, ಹಣದುಬ್ಬರದ ಬಗ್ಗೆ ಡಿಎಂಕೆ ಸುಳ್ಳುಗಳ ಅಭಿಯಾನವನ್ನು ಆರಂಭಿಸಿದೆ,’ ಭಾನುವಾರ ಅಣ್ಣಾಮಲೈ ಆರೋಪಿಸಿದ್ದಾರೆ.