Advertisement

ಈಡೇರಿಸಲಾಗದ ಭರವಸೆ ನೀಡುವ ಕಾಂಗ್ರೆಸ್‌: ಅಣ್ಣಾಮಲೈ ಆರೋಪ

12:25 AM Feb 28, 2023 | Team Udayavani |

ಉಡುಪಿ: ವಿಧಾನಸಭೆ ಚುನಾವಣೆಯನ್ನು ಹೇಗಾದರೂ ಮಾಡಿ ಗೆಲ್ಲಲು ಕಾಂಗ್ರೆಸ್‌ ಈಡೇರಿಸಲಾಗದ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಅಲ್ಲದೆ, ಕರ್ನಾಟಕದಲ್ಲಿ ಗೆದ್ದು ಮುಂದಿನ ಲೋಕಸಭೆ ಚುನಾವಣೆಗೆ ಎಟಿಎಂ ರೀತಿಯಲ್ಲಿ ರಾಜ್ಯವನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಯೋಚಿಸುತ್ತಿದೆ ಎಂದು ರಾಜ್ಯ ಬಿಜೆಪಿ ಚುನಾವಣೆ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಆರೋಪಿಸಿದರು.

Advertisement

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿ, ಕಾಂಗ್ರೆಸ್‌ ಗೆದ್ದು ರಾಜ್ಯ ಬಜೆಟ್‌ನಲ್ಲಿ ಶೇ.10ರಷ್ಟು ಕಮಿಷನ್‌ ಹೊಡೆದು ಮುಂದಿನೆರಡು ವರ್ಷ ಸುಮಾರು 50,000 ಕೋ.ರೂ. ಸಂಗ್ರಹಿಸಿ ಲೋಕಸಭೆ ಚುನಾವಣೆ ಎದುರಿಸಲು ಎಟಿಎಂ ರೀತಿಯಲ್ಲಿ ಕರ್ನಾಟಕವನ್ನು ಬಳಸುವ ಸಾಧ್ಯತೆಯಿದೆ ಎಂದು ದೂರಿದರು.

ಕಾಂಗ್ರೆಸ್‌ ಬಳಿ ಆರೋಪ ಮಾಡುವುದು ಬಿಟ್ಟರೆ ಬೇರೇನೂ ವಿಷಯವಿಲ್ಲ. ಆದರೆ ನಮ್ಮದು ಅಭಿವೃದ್ಧಿಯ ಅಜೆಂಡಾ. ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಮತ ಯಾಚನೆ ಮಾಡಲಿದ್ದೇವೆ. ಕಾಂಗ್ರೆಸ್‌ನ ಆರೋಪಕ್ಕೆ ಉತ್ತರ ನೀಡಬೇಕಾಗಿಲ್ಲ. ನಮ್ಮ ಕೆಲಸವನ್ನು ಇನ್ನಷ್ಟು ವೇಗವಾಗಿ ಮಾಡಿಕೊಂಡು ಹೋಗಬೇಕು ಎಂದರು.

ಉಡುಪಿಯಲ್ಲಿ 6 ಇಂಜಿನ್‌ ಸರಕಾರ
ಕೇಂದ್ರ, ರಾಜ್ಯ ಸರಕಾರ, ಎಲ್ಲ ಶಾಸಕರು, ಸಂಸದರು, ಈ ಹಿಂದೆ ಜಿ.ಪಂ., ತಾ.ಪಂ. ಕೂಡ ಬಿಜೆಪಿ ಸ್ವೀಪ್‌ ಮಾಡಿತ್ತು. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ 6 ಇಂಜಿನ್‌ ಸರಕಾರ ವಿದ್ದು,
ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಬಿಜೆಪಿಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ ಎಂದು ತಮ್ಮ ಆಡಳಿತದ ದಿನಗಳನ್ನು ಸ್ಮರಿಸಿಕೊಂಡರು.

ಕರ್ನಾಟಕವೇ ಬೆಸ್ಟ್‌
ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕವೇ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಮುಂದಿದೆ. ಮಕ್ಕಳ ಶಿಕ್ಷಣ, ಜಿಎಸ್‌ಟಿ ಸಂಗ್ರಹ, ತೆರಿಗೆ ಸಂಗ್ರಹ, ದೇಶದ ಶೇ. 50ರಷ್ಟು ಸ್ಟಾರ್ಟ್‌ಅಪ್‌ ಬೆಂಗಳೂರಿನಲ್ಲಿದ್ದಾರೆ. ಗ್ರಾಮೀಣಾಭಿವೃದ್ಧಿ, ಕೇಂದ್ರದ ಸೌಲಭ್ಯಗಳ ಸದುಪಯೋಗ ಹೀಗೆ ಎಲ್ಲದರಲ್ಲೂ ಕರ್ನಾಟಕ ಮೊದಲಿದೆ. ಮುಂದಿನ ಚುನಾವಣೆ ಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸೀಟು ಗೆದ್ದು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಪ್ರಾಸ್ತಾವಿಕ ಮಾತನಾಡಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ, ಶಾಸಕರಾದ ಕೆ.ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಕೆ. ಉದಯ ಕುಮಾರ್‌ ಶೆಟ್ಟಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಎ. ಸುವರ್ಣ, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್‌, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್‌ ಕಲ್ಮಾಡಿ, ಉಪಾಧ್ಯಕ್ಷರಾದ ಗೀತಾಂಜಲಿ ಸುವರ್ಣ, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್‌. ಶೆಟ್ಟಿ, ವಕ್ತಾರ ರಾಘವೇಂದ್ರ ಕಿಣಿ, ಸಹ ವಕ್ತಾರರಾದ ಪ್ರತಾಪ್‌ ಶೆಟ್ಟಿ ಚೇರ್ಕಾಡಿ, ಶಿವಕುಮಾರ್‌ ಅಂಬಲಪಾಡಿ, ಪ್ರಮುಖರಾದ ಶ್ಯಾಮಲಾ ಕುಂದರ್‌, ಶರತ್‌ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ದಿನಕರ ಬಾಬು, ನಳಿನಿ ಪ್ರದೀಪ್‌ ರಾವ್‌, ವೀಣಾ ನಾಯ್ಕ, ರವಿ ಅಮಿನ್‌, ಅಂಡಾರು ದೇವಿ ಪ್ರಸಾದ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ನವೀನ್‌ ಶೆಟ್ಟಿ ಕುತ್ಯಾರು ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ನಿರೂಪಿಸಿದರು.

ಪ್ರಗತಿ ರಥಕ್ಕೆ ಚಾಲನೆ
ಜಿಲ್ಲೆಯ ಐದು ಕ್ಷೇತ್ರದಲ್ಲೂ ಚುನಾವಣೆಯವರೆಗೂ ಬಿಜೆಪಿ ಸರಕಾರದ ಸಾಧನೆ ಮತ್ತು ಕಾಂಗ್ರೆಸ್‌ನ ದುರಾಡಳಿತವನ್ನು ಒಳಗೊಂಡ ವೀಡಿಯೋ ಸಂದೇಶವನ್ನು ಗ್ರಾಮ ಗ್ರಾಮಕ್ಕೂ ತಲುಪಿಸುವ ಪ್ರಗತಿ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಚಾಲನೆ ನೀಡಿದರು. ಈ ವೇಳೆ ಪಕ್ಷದ ಎಲ್ಲ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next