Advertisement

ಮುಂಗಾರು ಬಿತ್ತನೆಗೆ ಸಜ್ಜಾದ ಅನ್ನದಾತ

05:30 PM Jun 01, 2020 | Suhan S |

ಕೊಪ್ಪಳ: ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಮುಂಗಾರು ಪೂರ್ವ ಮಳೆಗಳ ಅಬ್ಬರ ಜೋರಾಗಿದೆ. ಅನ್ನದಾತ ಈಗಾಗಲೇ ಖಷಿಯಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿ, ಕೃಷಿ ಭೂಮಿಯನ್ನು ಸಜ್ಜು ಮಾಡಿಕೊಳ್ಳುತ್ತಿದ್ದಾನೆ. ಕೃಷಿ ಇಲಾಖೆಯು ಬಿತ್ತನೆಯ ಗುರಿಗೆ ತಕ್ಕಂತೆ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದೆ.

Advertisement

ಹೌದು. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಪೂರ್ವ ಮಳೆಗಳು ರೈತರಲ್ಲಿ ಭಾರಿ ಭರವಸೆ ಮೂಡಿಸುತ್ತಿವೆ. ಕೆಲವು ಹೋಬಳಿಯಲ್ಲಿ ಸಮೃದ್ಧಿ ಮಳೆಯಾಗಿವೆ. ಇನ್ನೂ ಕೆಲವು ಹೋಬಳಿಯಲ್ಲಿ ಸಾಧಾರಣ ಮಳೆ ಸುರಿದಿವೆ. ಕೃಷಿಯನ್ನೇ ಆಸರೆಯಾಗಿಸಿಕೊಂಡಿರುವ ಅನ್ನದಾತ ಆಶಾವಾದದಿಂದಲೇ ಬಿತ್ತನೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲೂ ಸರ್ಕಾರವು ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಪೂರ್ವ ತಯಾರಿ ಮಾಡಿಕೊಂಡಿದ್ದು, ಪ್ರಸಕ್ತ ವರ್ಷ ಮುಂಗಾರಿನಲ್ಲಿ ಕೊಪ್ಪಳ ತಾಲೂಕಿನಲ್ಲಿ 64,425 ಹೆಕ್ಟೇರ್‌, ಕುಷ್ಟಗಿ ತಾಲೂಕಿನಲ್ಲಿ 67,575 ಹೆಕ್ಟೇರ್‌, ಯಲಬುರ್ಗಾ 56,445, ಗಂಗಾವತಿ ತಾಲೂಕಿನಲ್ಲಿ 64,055 ಹೆಕ್ಟೇರ್‌ ಸೇರಿದಂತೆ ಒಟ್ಟಾರೆ 2,52,500 ಹೆಕ್ಟೇರ್‌ ಪ್ರದೇಶವನ್ನು ಬಿತ್ತನೆಯ ಗುರಿಯನ್ನಾಗಿಸಿಕೊಂಡಿದೆ.

ಬಿತ್ತನೆ ಆರಂಭ: ಇನ್ನೂ ಮುಂಗಾರು ಪೂರ್ವ ಮಳೆಗಳಿಗೆ ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನ ಅಳವಂಡಿ, ಸಿಂಧೋಗಿಯ ಎರೆ ಭಾಗದಲ್ಲಿ ಹೆಸರು ಬಿತ್ತನೆ ಕಾರ್ಯವೂ ಆರಂಭವಾಗಿದೆ. ಒಂದೆರಡು ಮಳೆಗಳಿಗೆ ಇಲ್ಲಿ ಬಿತ್ತನೆ ನಡೆಯಲಿದೆ. ಈ ಪೈಕಿ ಈಗಾಗಲೆ 17,240 ಹೆಕ್ಟೇರ್‌ ಪ್ರದೇಶ ಬಿತ್ತನೆ ನಡೆದು, ಶೇ. 6.83 ರಷ್ಟು ಬಿತ್ತನೆ ದಾಖಲಾಗಿದೆ.

ಬೀಜ, ಗೊಬ್ಬರ ಅಗತ್ಯ ದಾಸ್ತಾನು: ಇನ್ನೂ ಜಿಲ್ಲೆಯಲ್ಲಿ ಮುಂಗಾರಿ ಬಿತ್ತನೆ ವೇಳೆ ರೈತರಿಗೆ ಬೀಜ, ಗೊಬ್ಬರದ ಕೊರತೆಯಾಗದಂತೆ ನಿಗಾ ವಹಿಸಲು ಕೃಷಿ ಇಲಾಖೆ ಬೇಸಿಗೆ ವೇಳೆ ಎರಡನ್ನೂ ದಾಸ್ತಾನು ಮಾಡಿಕೊಂಡಿದೆ. ಯೂರಿಯಾ 3562 ಟನ್‌, ಡಿಎಪಿ 2286 ಟನ್‌, ಎಂಒಪಿ 913 ಟನ್‌, ಎನ್‌ ಪಿಕೆಎಸ್‌ 6565, ಎಸ್‌ಎಸ್‌ಪಿ 76 ಟನ್‌ ಸೇರಿದಂತೆ ಒಟ್ಟಾರೆ ಜಿಲ್ಲೆಯ 20 ರೈತ ಸಂಪರ್ಕ ಕೇಂದ್ರಗಳಲ್ಲಿ 13,403 ಗೊಬ್ಬರ ದಾಸ್ತಾನು ಮಾಡಿದೆ. ಇನ್ನೂ ಬೀಜವು 2838 ಕ್ವಿಂಟಲ್‌ ದಾಸ್ತಾನಿದೆ. ಅಲ್ಲದೇ, ವಿವಿಧ ಬೀಜ ಕೇಂದ್ರಗಳಲ್ಲೂ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಸರಾಸರಿ ಮಳೆ ಪ್ರಮಾಣ: ಜಿಲ್ಲೆಯಲ್ಲಿ ಕಳೆದ ಮೇ 1ರಿಂದ ಮೇ 28ರವರೆಗೂ ಜಿಲ್ಲೆಯಲ್ಲಿ 70 ಮಿ.ಮೀ ಮಳೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ 51 ಮಿ.ಮೀ., ಕೊಪ್ಪಳ ತಾಲೂಕಿನಲ್ಲಿ 68 ಮಿ.ಮೀ., ಕುಷ್ಟಗಿ ತಾಲೂಕಿನಲ್ಲಿ 77 ಮಿ.ಮೀ., ಯಲಬುರ್ಗಾ ತಾಲೂಕಿನಲ್ಲಿ 79 ಮಿ.ಮೀ. ಸೇರಿದಂತೆ ಒಟ್ಟಾರೆ 70 ಮಿ.ಮೀ ಮಳೆಯಾಗಿದೆ. ಅಂದರೆ ಈ ತಿಂಗಳಲ್ಲಿ ವಾಡಿಕೆ 50 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 70 ಮಿ.ಮೀ. ಮಳೆಯಾಗಿದೆ. ಶೇ. 40ರಷ್ಟು ಹೆಚ್ಚು ಮಳೆಯಾಗಿದೆ ಎಂದು ಇಲಾಖೆ ವರದಿಯಲ್ಲಿ ದಾಖಲಾಗಿದೆ.

ಈಗಾಗಲೇ ಜಿಲ್ಲೆಯ ಕೆಲ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಗೆ ಬಿತ್ತನೆ ಕಾರ್ಯ ನಡೆದಿದೆ. ಇನ್ನೂ ಕೆಲವು ಭಾಗದಲ್ಲಿ ಬಿತ್ತನೆಗೆ ರೈತರು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಬೀಜ, ಗೊಬ್ಬರದ ಕೊರತೆಯಿಲ್ಲ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲೂ ದಾಸ್ತಾನು ಮಾಡಿದ್ದೇವೆ. ಮಳೆಯಾದ ತಕ್ಷಣ ರೈತರು ಖರೀದಿಯಲ್ಲಿ ತೊಡಗುತ್ತಾರೆ. -ಶಬಾನಾ ಶೇಖ್‌, ಜಂಟಿ ಕೃಷಿ ನಿರ್ದೇಶಕಿ

Advertisement

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next