Advertisement
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ಬೆಂಗಳೂರು: “ಅನ್ನಭಾಗ್ಯ”ಕ್ಕೆ ಅಗತ್ಯವಿರುವ ಅಕ್ಕಿ ಪೂರೈಕೆ ವಿಚಾರದಲ್ಲಿ ಕೇಂದ್ರದ ನಿರಾಕರಣೆ ವಿರುದ್ಧ ರಾಜ್ಯಾದ್ಯಂತ ಮಂಗಳವಾರ ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು, ಮಳೆಯನ್ನೂ ಲೆಕ್ಕಿಸದೆ ಬೆಂಗಳೂರು ಸೇರಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಸ್ಪಂದನೆ ಸಿಗದಿದ್ದರೆ, ಹೋರಾಟವನ್ನು ತಾಲೂಕು ಮಟ್ಟದಲ್ಲಿ ಮತ್ತಷ್ಟು ತೀವ್ರವಾಗಿ ನಡೆಸಲಾಗುವುದು ಎಂದು ಎಚ್ಚರಿಸಿದರು.
Related Articles
Advertisement
ಜನರ ಎತ್ತಿಕಟ್ಟುವ ಹುನ್ನಾರ; ಡಿಕೆಶಿ ಆರೋಪಪ್ರತಿಭಟನೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರ ಕೇಂದ್ರದ ಈ ನಿರ್ಧಾರದ ಹಿಂದೆ ಅಡಗಿದೆ. ಆದರೆ, ಯಾವುದೇ ಕಾರಣಕ್ಕೂ ಇದು ಯಶಸ್ವಿಯಾಗಲು ಅವಕಾಶ ನೀಡುವುದಿಲ್ಲ. ಶತಾಯಗತಾಯ ಅನ್ನಭಾಗ್ಯ ಯೋಜನೆ ಜಾರಿಗೊಳ್ಳಲಿದೆ’ ಎಂದು ಹೇಳಿದರು. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ನಾವು ಬೇರೆ ರಾಜ್ಯಗಳಿಂದ ಖರೀದಿ ಮಾಡಿ ನೀಡುತ್ತೇವೆ. ಅದಕ್ಕೆ ಸರ್ಕಾರ ಹಾಗೂ ಮಂತ್ರಿಗಳು ಬೇರೆ ರಾಜ್ಯಗಳ ಜತೆ ಸಂಪರ್ಕ ಮಾಡುತ್ತಿದ್ಧಾರೆ. 5 ಕೆಜಿಯಷ್ಟು ನೀಡಲು ನಮ್ಮ ಬಳಿ ಅಕ್ಕಿ ಇದೆ. ಉಳಿದ 5 ಕೆಜಿಗೆ ಹೊಂದಿಸುತ್ತಿದ್ದೇವೆ. ಕೆಲವರು ನಮಗೆ ಅಕ್ಕಿ ಬದಲು ರಾಗಿ, ಜೋಳ ಕೇಳುತ್ತಿದ್ಧಾರೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಾಗುವುದು ಎಂದರು. ಸರ್ಕಾರ ಒಂದು ಗ್ರಾಂ ಅಕ್ಕಿ ಕಡಿಮೆ ಕೊಟ್ಟರೂ ಸುಮ್ಮನಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ಧಾರೆ. ಹಾಗಿದ್ದರೆ, ನಿಮ್ಮ ಪಕ್ಷ (ಕೇಂದ್ರ ಸರ್ಕಾರ) ಹೇಳಿದಂತೆ, ನೀವು ಇನ್ನೂ ಯಾಕೆ ಎಲ್ಲರ ಖಾತೆಗೆ 15 ಲಕ್ಷ ಹಾಕಿಸಿಲ್ಲ? ರೈತರ ಆದಾಯ ಯಾಕೆ ದ್ವಿಗುಣ ಮಾಡಿಲ್ಲ? ಯುವಕರಿಗೆ ಯಾಕೆ ಉದ್ಯೋಗ ನೀಡಿಲ್ಲ? ಈ ಬಗ್ಗೆ ನೀವು ಮೊದಲು ಉತ್ತರ ನೀಡಿ ಎಂದು ತರಾಟೆಗೆ ತೆಗೆದುಕೊಂಡರು. ಗ್ಯಾರಂಟಿಗಳಿಗೆ ಷರತ್ತು ಖಂಡಿಸಿ ಬಿಜೆಪಿ ವಾಗ್ಧಾಳಿ
ಬೆಂಗಳೂರು: ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಬೇಷರತ್ ಆಗಿ ಗ್ಯಾರಂಟಿಗಳನ್ನು ನೀಡಿ ಸರ್ಕಾರ ರಚನೆಯಾದ ಬಳಿಕ ಷರತ್ತು ವಿಧಿಸುತ್ತಿರುವುದನ್ನು ಖಂಡಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ ಪ್ರಸಂಗ ನಡೆಯಿತು. ಪೊಲೀಸ್ ವಶದಿಂದ ಬಿಡುಗಡೆಯಾದ ಬಳಿಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ನಾಯಕರು ಮಾಧ್ಯಮಗಳ ಮುಂದೆ ಹರಿಹಾಯ್ದರು. ನಗರದ ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುವುದಾಗಿ ಸೋಮವಾರವೇ ಬಿಜೆಪಿ ನಾಯಕರು ಪ್ರಕಟಿಸಿದ್ದರು. ಅದರಂತೆ ಮಂಗಳವಾರ ಮಳೆಯ ನಡುವೆಯೇ ಪ್ರತಿಭಟನೆಗೆ ಬಿಜೆಪಿಯ ಹಿರಿಯ ನಾಯಕರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ರವಿಕುಮಾರ್, ಶಾಸಕರಾದ ಮುನಿರಾಜು, ಎಂ.ಕೃಷ್ಣಪ್ಪ, ಛಲವಾದಿ ನಾರಾಯಣಸ್ವಾಮಿ ಮುಂತಾದವರು ನಿಗದಿತ ಸ್ಥಳಕ್ಕೆ ಆಗಮಿಸಿದರು. ಆದರೆ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂದು ಹೈಗ್ರೌಂಡ್ಸ್ ಪೊಲೀಸರು ಇವರನ್ನು ವಶಕ್ಕೆ ಪಡೆದರು.
ಪೊಲೀಸರ ವಿರೋಧದ ನಡುವೆಯೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ನಾಯಕರೇ ನಿಮಗೆ ಮಾನ ಮಾರ್ಯದೆ ಇದೆಯಾ? ಡೊಂಗಿ ರಾಜಕಾರಣ ಮಾಡುತ್ತೀರಾ? ಅಕ್ಕಿ ಕೊಡುವುದನ್ನು ಮುಂದುವರಿಸಿದರೆ ದುಡ್ಡು ಉಳಿಸಬಹುದು ಎಂಬುದು ಸರ್ಕಾರದ ಉದ್ದೇಶ. ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದು ಗೂಂಡಾ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಬೊಮ್ಮಾಯಿ ಅವರನ್ನು ಪೊಲೀಸ್ ವಾಹನದಲ್ಲಿ ಕೊಂಡೊಯ್ಯಲು ಮುಂದಾದಾಗ ವಿರೋಧ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ನವರಿಗೆ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೀರಿ, ನಮಗೆ ಅವಕಾಶ ಕೊಡುತ್ತಿಲ್ಲ ಎಂದು ಟೀಕಿಸಿದರು. ಬಳಿಕ ಎಲ್ಲರನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಇದೊಂದು ಸುಳ್ಳ- ಮಳ್ಳ ಸರಕಾರ
ಪೊಲೀಸರ ವಶದಿಂದ ಬಿಡುಗಡೆಗೊಂಡ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಅವರಿಗೆ ಧಮ್ಮಿದ್ರೆ, ತಾಕತ್ತಿದ್ರೆ ನೀಡಿದ ಭರವಸೆಯಂತೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡಬೇಕು. ಒಂದು ಕುಟುಂಬದಲ್ಲಿ 5 ಜನರಿದ್ದರೆ 50 ಕೆಜಿ ಕೊಡಬೇಕು. ಆದರೆ ಕಾಂಗ್ರೆಸ್ ಅಕ್ಕಿ ಕೊಡದೆ ಪ್ರತಿಭಟನೆ ಮಾಡುತ್ತಿದೆ. ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದು ಪ್ರತಿಭಟನೆ ಮಾಡಲೆಂದೇ ಎಂದು ಪ್ರಶ್ನಿಸಿದರು. ಇದೊಂದು ಸುಳ್ಳ- ಮಳ್ಳ ಸರಕಾರ. ರಾಜ್ಯ ಸರಕಾರ ಕರೆಂಟ್ ಶಾಕ್ ಕೊಡುತ್ತಿದೆ. ಸರ್ಕಾರ ನೀಡುತ್ತಿರುವ ವಿದ್ಯುತ್ ಬಿಲ್ಲನ್ನು ಬಡವರು, ಉದ್ಯಮಿಗಳು ಸೇರಿ ಯಾರಿಗೂ ಕಟ್ಟಲು ಸಾಧ್ಯವಿಲ್ಲ. ಇದರಿಂದ ಮುಂದೆ ಕೈಗಾರಿಕೆಗಳು ಬಂದ್ ಆಗಲಿವೆ. ಸರಕಾರ ಮನಸ್ಸು ಮಾಡಿದರೆ ವಿದ್ಯುತ್ ದರ ಏರಿಸದೆ ಇರಬಹುದಿತ್ತು. ಶಾಲಾ ಮಕ್ಕಳಿಗೆ ಬಸ್ ಸೌಕರ್ಯವಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದು ಮುಂದೆ ಬಸ್ ಸೇವೆಯೂ ನಿಲ್ಲಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಲಾಠಿಯಲ್ಲಿ ಶಕ್ತಿಯೋ, ರಟ್ಟೆಯಲ್ಲಿ ಶಕ್ತಿಯೋ?: ತಮ್ಮನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾದ ಪೊಲೀಸರ ಕ್ರಮವನ್ನು ಆಕ್ಷೇಪಿಸಿದ ಬೊಮ್ಮಾಯಿ, ನಿಮ್ಮ ಪೊಲೀಸ್ ರಾಜ್ಯಕ್ಕೆ ಹೆದರುವುದಿಲ್ಲ. ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ, ನಮ್ಮ ರಟ್ಟೆಯಲ್ಲಿ ಶಕ್ತಿ ಇದೆಯೋ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನಮ್ಮ ಹೋರಾಟ ವಿಧಾನಸಭೆ ಒಳಗೆ ಮತ್ತು ಹೊರಗೆ ಮುಂದುವರೆಯುತ್ತದೆ ಎಂದು ಹೇಳಿದರು. ಮತಾಂತರ ನಿಷೇಧ ಕಾಯ್ದೆ ಹಿಂತೆಗೆತವನ್ನು ಖಂಡಿಸಿ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ. ವಿಧಾನ ಸಭೆಯ ಒಳಗೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ. ರಾಜ್ಯದ ಜನರನ್ನು ಒಳಗೊಂಡು ಜೈಲ್ ಭರೋ ಅಥವಾ ಇನ್ನಿತರ ಉಗ್ರ ಹೋರಾಟ ನಡೆಸುತ್ತೇವೆ ಎಂದು ಪ್ರಕಟಿಸಿದರು.