ವಿಧಾನಸಭೆ: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಸರ್ಕಾರ ನೀಡುವ ಅಕ್ಕಿಯನ್ನು ಕೋಳಿ ಕೂಡ ತಿನ್ನುವುದಿಲ್ಲ ಎಂಬ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿಕೆ ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಅನುಮೋದಿಸಿದ ಕಾಂಗ್ರೆಸ್ ಸದಸ್ಯ ಡಾ.ಸುಧಾಕರ್ ಮಾತನಾಡುತ್ತಾ ಅನ್ನಭಾಗ್ಯ ಯೋಜನೆ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರಿಂದ ಬಡವರಿಗೆ ಉಚಿತವಾಗಿ ಅಕ್ಕಿ, ಗೋಧಿ, ಜೋಳ ಸಿಗುವಂತಾಗಿದೆ. ಇದರಿಂದಾಗಿ ನೋಟು ಅಮಾನ್ಯದಿಂದಾಗಿ ಆಗಿರುವ ಸಮಸ್ಯೆ ನಡುವೆಯೂ ಬಡವರು ಊಟ ಮಾಡುವಂತಾಗಿದೆ ಎಂದರು.
ಮಧ್ಯಪ್ರವೇಶಿಸಿದ ಜೆಡಿಎಸ್‌ನ ಸಾ.ರ.ಮಹೇಶ್, ಅನ್ನಭಾಗ್ಯದ ಬಗ್ಗೆ ಹೊಗಳುವುದು ಮಾತ್ರವಲ್ಲ, ನನ್ನ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮಂದಿಗೆ ಪಡಿತರವೇ ಸಿಗುತ್ತಿಲ್ಲ. ಅವರು ಉಪವಾಸ ಇರಬೇಕೇ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿಯ ಗೋವಿಂದ ಕಾರಜೋಳ ಕೂಡ ದನಿಗೂಡಿಸಿದರು.
ಅಷ್ಟರಲ್ಲಿ ಎದ್ದುನಿಂತ ವೈ.ಎ.ನಾರಾಯಣಸ್ವಾಮಿ, ಸರ್ಕಾರ ಕೊಡುವ ಅಕ್ಕಿಯನ್ನು ಕೋಳಿಗಳು ಕೂಡ ತಿನ್ನುವುದಿಲ್ಲ ಎಂದಾಗ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಕೋಟ್ಯಂತರ ಬಡವರು ತಿನ್ನುವ ಆಹಾರದ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಈ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಸದನದಲ್ಲಿ ಸ್ವಲ್ಪ ಹೊತ್ತು ಗದ್ದಲ ಸೃಷ್ಟಿಯಾಯಿತು. ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.