Advertisement

ಅನ್ನಭಾಗ್ಯ: ಏಪ್ರಿಲ್‌ನಲ್ಲಿ ತೊಗರಿ ಬೇಳೆ ಸಿಕ್ಕಿಲ್ಲ

11:22 PM May 01, 2019 | Lakshmi GovindaRaj |

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮುಂದುವರಿಸಿಕೊಂಡು ಬಂದಿರುವ ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ “ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ ತೊಗರಿ ಬೇಳೆ ಸಿಕ್ಕಿಲ್ಲ.

Advertisement

ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳು ಕಳೆದೆರಡು ತಿಂಗಳಿಂದ ತೊಗರಿ ಬೇಳೆಯಿಂದ ವಂಚಿತರಾಗಿದ್ದಾರೆ. ಆದರೆ, ಏಪ್ರಿಲ್‌ ತಿಂಗಳಲ್ಲಿ ಮಾತ್ರ ತೊಗರಿ ಬೇಳೆ ಕೊಡಲು ಆಗಿಲ್ಲ. ಮೇ ತಿಂಗಳಿಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯ ಫ‌ಲಾನುಭವಿಗಳಿಗೆ ಪ್ರತಿ ತಿಂಗಳು ತೊಗರಿ ಬೇಳೆ ನೀಡಬೇಕಾದರೆ ಒಂದು ತಿಂಗಳ ಹಿಂದೆಯೇ ತೊಗರಿ ಬೇಳೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕಾಗುತ್ತದೆ. ಆದರೆ, ಅಧಿಕಾರಿಗಳು ಸಕಾಲದಲ್ಲಿ ಪ್ರಕ್ರಿಯೆ ಆರಂಭ ಮಾಡದೆ ಇದ್ದ ಕಾರಣದಿಂದಾಗಿ ಕಳೆದೆರಡು ತಿಂಗಳಿಂದ ಬಿಪಿಎಲ್‌ ಕುಟುಂಬಗಳಿಗೆ ತೊಗರಿ ಬೇಳೆ ಸಿಕ್ಕಿಲ್ಲ ಎನ್ನಲಾಗಿದೆ.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಬೇಕಾಗುವ ತೊಗರಿ ಬೇಳೆಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ (ನಾಫೆಡ್‌) ಖರೀದಿ ಮಾಡಲಾಗುತ್ತದೆ.

ಮುಂದಿನ ತಿಂಗಳಿಗೆ ಬೇಕಾಗುವ ತೊಗರಿ ಬೇಳೆಯ ಖರೀದಿಗೆ ಹಿಂದಿನ ಒಂದು ತಿಂಗಳಿಂದ ಪ್ರಕ್ರಿಯೆ ಪ್ರಾರಂಭಿಸಬೇಕಾಗುತ್ತದೆ. ಆ ತಿಂಗಳಿಗೆ ಎಷ್ಟು ತೊಗರಿ ಬೇಳೆ ಬೇಕು ಎಂಬ ವಿವರ ಸಲ್ಲಿಸಿ, ಅದಕ್ಕೆ ತಗಲುವ ಹಣವನ್ನು ಪಾವತಿ ಮಾಡಬೇಕು.

Advertisement

ಆದರೆ, ಸಂಬಂಧಪಟ್ಟ ಅಧಿಕಾರಿಗಳು ಸಕಾಲದಲ್ಲಿ ಆ ಕೆಲಸ ಮಾಡದೆ ಇರುವುದರಿಂದ ಮಾರ್ಚ್‌ನಲ್ಲಿ ತೊಗರಿ ಬೇಳೆ ಖರೀದಿ ಆಗಿಲ್ಲ. ಹಾಗಾಗಿ, ಏಪ್ರಿಲ್‌ನಲ್ಲಿ ಕೊಡಲು ಆಗಿಲ್ಲ. ಮೇ ತಿಂಗಳಿಗೆ ಬೇಕಾಗುವ ತೊಗರಿ ಬೇಳೆ ಖರೀದಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದ್ದು, ಈ ತಿಂಗಳು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿದ್ದಾರೆ.

13 ಸಾವಿರ ಮೆಟ್ರಿಕ್‌ ಟನ್‌ ಬೇಕು: ರಾಜ್ಯದಲ್ಲಿ ಒಟ್ಟು 1.43 ಕೋಟಿ ಬಿಪಿಲ್‌ ಕಾರ್ಡ್‌ಗಳಿದ್ದು, 4.86 ಕೋಟಿ ಫ‌ಲಾನುಭವಿಗಳಿದ್ದಾರೆ. ಪ್ರತಿ ಕಾರ್ಡ್‌ಗೆ ಪ್ರತಿ ತಿಂಗಳು 1 ಕೆ.ಜಿ ತೊಗರಿ ಬೇಳೆ ವಿತರಿಸಲು ತಿಂಗಳಿಗೆ ಸುಮಾರು 13 ಸಾವಿರ ಮೆಟ್ರಿಕ್‌ ಟನ್‌ ತೊಗರಿ ಬೇಳೆ ಬೇಕು.

ಇದಕ್ಕಾಗಿ ತಿಂಗಳಿಗೆ 65 ಕೋಟಿ ರೂ.ಪಾವತಿಸಬೇಕಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿ ಕೇಂದ್ರದಿಂದ ಬರುತ್ತದೆ. ಆದರೆ, ತೊಗರಿ ಬೇಳೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಖರೀದಿಸಬೇಕಾಗುತ್ತದೆ. ಅಲ್ಲದೆ ಇದನ್ನು ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ಖರೀದಿ ಮಾಡುವಂತಿಲ್ಲ. ಕರ್ನಾಟಕ ಆಹಾರ ನಿಗಮದ ಮೂಲಕ ನಾಫೆಡ್‌ನಿಂದ ಮಾತ್ರ ಖರೀದಿ ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next