ವಿದೇಶ ಪ್ರವಾಸದಿಂದ ವಾಪಸ್ ಆದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಅವರು ಶುಕ್ರವಾರ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದು ಬಿಡಿಎ ಅಧಿಕಾರಿಗಳಿಂದ 250 ಕೊಟಿ ರೂ. ಡಿಮ್ಯಾಂಡ್ ಮಾಡಲಾಗಿದೆ ಎಂದು ಬಾಂಬ್ ಸಿಡಿಸಿದ್ದರು. ಅದಕ್ಕೆ ಕಾಂಗ್ರೆಸ್ ಮುಖಂಡರೂ ತಿರುಗೇಟು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಶನಿವಾರವೂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪ ಮುಂದುವರಿದಿದ್ದು, ರಾಜಕೀಯ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.
ಬೆಂಗಳೂರು: ಈ ಸರ್ಕಾರದಲ್ಲಿ ವರ್ಗಾವಣೆ ಬಗ್ಗೆ ಮಾತನಾಡುವುದೇ ಅಹಸ್ಯ ಎನಿಸಿಬಿಟ್ಟಿದೆ. ಕನಿಷ್ಠ 1 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಇಂತಹ ದರಿದ್ರ ಸರ್ಕಾರ ಎಂದೂ ಕಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವಿದೇಶ ಪ್ರವಾಸದಿಂದ ಮರಳಿದ ಬಳಿಕ ಶನಿವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಡಿ-ದರ್ಜೆ ನೌಕರರನ್ನೂ ಬಿಡದೆ ವರ್ಗಾವಣೆ ಮಾಡಲಾಗುತ್ತಿದ್ದು, ಎಲ್ಲದಕ್ಕೂ ದರ ನಿಗದಿಯಾಗಿದೆ. ಇಂತಹ ಇಲಾಖೆಯಲ್ಲಿ ಈ ದಂಧೆ ಇಲ್ಲ ಎನ್ನುವಂತಿಲ್ಲ. ಪೊಲೀಸ್ ಇಲಾಖೆಯಲ್ಲೂ ಸಾಕಷ್ಟು ವರ್ಗಾವಣೆ ನಡೆಯುತ್ತಿದೆ ಎಂದು ಆರೋಪಿಸಿದರು.
ಸಮ್ಮಿಶ್ರ ಸರ್ಕಾರವಿದ್ದಾಗ ವರ್ಗಾವಣೆ ಬಗ್ಗೆ ನಾನು ಸಲಹೆ ಕೊಡುತ್ತಿರಲಿಲ್ಲವೇ ಎಂದು ನನ್ನನ್ನು ಪರಮೇಶ್ವರ್ ಪ್ರಶ್ನಿಸಿದ್ದಾರೆ. ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ವರ್ಗಾವಣೆಗಳನ್ನು ಡಿಜಿ ಅಧಿಕಾರ ವ್ಯಾಪ್ತಿಗೆ ಬಿಟ್ಟಿದ್ದೆ. ಎಂದಿಗೂ ಮಧ್ಯಪ್ರವೇಶಿಸಿರಲಿಲ್ಲ. ಏನು ಸಲಹೆ ಕೊಡುತ್ತಿದ್ದೆ ಎನ್ನುವುದನ್ನೂ ಹೇಳಲಿ. ಪೊಲೀಸ್ ಮೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ. ಪರಮೇಶ್ವರ್ ನಡುವೆ ವರ್ಗಾವಣೆ ವಿಚಾರವಾಗಿಯೇ ಗಲಾಟೆ ನಡೆದಿದೆ. ಅಲ್ಲಿನ ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದರು.
ಗ್ಯಾರಂಟಿಗಳ ಭಜನೆ ನಿಲ್ಲಿಸಿ: ನಮ್ಮ ಪೊಲೀಸರು ಕೇರಳಕ್ಕೆ ಹೋಗಿ ಅಲ್ಲಿನ ಪೊಲೀಸರಿಂದ ಬಂಧನಕ್ಕೊಳಗಾಗುತ್ತಾರೆ. ಹುದ್ದೆಗಾಗಿ ಕೊಟ್ಟಿದ್ದನ್ನು ಮತ್ತೆ ಸಂಪಾದಿಸಲು ಅಲ್ಲಿಗೆ ಹೋಗಿದ್ದರಾ? ದೇಶಕ್ಕೆ ಕರ್ನಾಟಕ ಮಾದರಿ ಎನ್ನುವ ನೀವು ಎಂತಹ ಆಡಳಿತ ಕೊಡುತ್ತಿದ್ದೀರಿ? ಈ ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ? ವೈಎಸ್‌ಟಿ ಟ್ಯಾಕ್ಸ್ ಬಗ್ಗೆ ದಿಲ್ಲಿ ಮಟ್ಟದಲ್ಲಿ ಚರ್ಚೆ ಆಗಿದೆ. ಇಲ್ಲದಿದ್ದರೆ, 35 ಶಾಸಕರು ಏಕೆ ಪತ್ರ ಬರೆಯುತ್ತಿದ್ದರು? ನಾನು ಹೇಳಿದ್ದನೇ ಪತ್ರ ಬರೆಯಲು? ನಿಮ್ಮ ಗ್ಯಾರಂಟಿಗಳ ಭಜನೆ ನಿಲ್ಲಿಸಿ. ರಾಜ್ಯದ ಬೊಕ್ಕಸ ತುಂಬಿದ್ದರೆ ನಾನೂ ಇಂತಹ 10 ಗ್ಯಾರಂಟಿಗಳನ್ನು ಕೊಡಬಲ್ಲೆ ಎಂದು ಹರಿಹಾಯ್ದರು.
ಮೂಟೆಗಟ್ಟಲೆ ದಾಖಲೆಗಳಿವೆ: ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೇ ನಿಮ್ಮ ಎಷ್ಟು ಮಂತ್ರಿಗಳು ನಿದ್ದೆಗೆಟ್ಟಿದ್ದಾರೆ ಗೊತ್ತಿದೆಯೇ? ಪೆನ್‌ಡ್ರೈವ್‌ನಲ್ಲಿ ಏನಿದೆ? ಯಾರ ಬಗ್ಗೆ ಇದೆ ಎಂದೆಲ್ಲಾ ತಿಳಿದುಕೊಳ್ಳಲು ಯಾರ್ಯಾರು ನನ್ನ ಬಳಿ ಬಂದಿದ್ದರು ಎಂಬುದೂ ಗೊತ್ತಿದೆ. ಅದು ಎಸ್‌ಪಿ ರಸ್ತೆಯಿಂದ ತಂದ ಪೆನ್‌ಡ್ರೈವ್ ಅಲ್ಲ. ಅದರಲ್ಲಿರುವ ಧ್ವನಿಯನ್ನು ಮಿಮಿಕ್ರಿ ಮಾಡಿರುವುದು ಎಂದು ಬೇಕಿದ್ದರೂ ಹೇಳುತ್ತೀರಿ. ನನ್ನ ವಿರುದ್ಧ 150 ಕೋಟಿ ರೂ. ಆರೋಪ ಮಾಡಿ, ಅದನ್ನು ಸಾಬೀಪಡಿಸುವ ಸಿಡಿಯನ್ನು ಮುಂಬಯಿಯಲ್ಲಿ ಸಿದ್ಧಪಡಿಸಲು ಹೋಗಿದ್ದು ನನಗೇನು ತಿಳಿದಿಲ್ಲವೇ? ದೇವೇಗೌಡರ ಕುಟುಂಬ ನಾಶ ಮಾಡುವುದೇ ಗುರಿ ಎಂದು ಯಡಿಯೂರಪ್ಪ ಅವರು ಕೆಣಕಿದ್ದರಿಂದ ಹೋರಾಟ ಶುರು ಮಾಡಬೇಕಾಯಿತು. ನೀವೂ ಎಷ್ಟು ಕೆಣಕುತ್ತೀರೋ ಕೆಣಕಿ. ಮೂಟೆಗಟ್ಟಲೆ ದಾಖಲೆಗಳಿವೆ ಎಂದು ಎಚ್ಚರಿಸಿದರು