Advertisement

ಅನ್ನ-ಸಾಂಬಾರ್‌ ಮಾತ್ರ ಲಭ್ಯ !

04:11 PM Oct 14, 2018 | |

ಗದಗ: ಅತ್ಯಲ್ಪ ದರದಲ್ಲಿ ಬಡವರ ಹೊಟ್ಟೆ ತುಂಬಿಸಬೇಕೆಂಬ ಮಹಾತ್ವಕಾಂಕ್ಷಿಯ ‘ಇಂದಿರಾ ಕ್ಯಾಂಟೀನ್‌’ಗೆ ಬೆಟಗೇರಿಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಆಹಾರ ಪಟ್ಟಿಯಲ್ಲಿ(ಮೆನು) ತೋರಿಸಿದ್ದಷ್ಟು ಖಾದ್ಯಗಳ ಪೂರೈಕೆಯಿಲ್ಲ. ಕ್ಯಾಂಟೀನ್‌ ಆರಂಭಗೊಂಡು ವಾರ ಕಳೆದರೂ ಅನ್ನ-ಸಾಂಬರ್‌, ಪಲಾವ್‌ಗೆ ಸೀಮಿತಗೊಂಡಿದೆ.

Advertisement

ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ನಗರಸಭೆ ಆಶ್ರಯದಲ್ಲಿ ಬೆಟಗೇರಿಯಲ್ಲಿ ‘ಇಂದೀರಾ ಕ್ಯಾಂಟೀನ್‌’ ಸ್ಥಾಪಿಸಿದ್ದು, ಅ. 5ರಿಂದ ಕಾರ್ಯಾರಂಭ ಮಾಡಿದೆ. ಕ್ಯಾಂಟೀನ್‌ ಉದ್ಘಾಟನೆಗೊಂಡು ಬರೋಬ್ಬರಿ ಒಂಬತ್ತು ದಿನಗಳು ಕಳೆದರೂ ಇಡ್ಲಿ ಪಾತ್ರೆ ಸೇರಿದಂತೆ ಇನ್ನಿತರೆ ಅಗತ್ಯ ಸಾಮಗ್ರಿಗಳೇ ಪೂರೈಕೆಯಾಗಿಲ್ಲ. ಹೀಗಾಗಿ ದಿನಕ್ಕೊಂದರಂತೆ ಬೆಳಗ್ಗೆ ಸಿರಾ-ಉಪ್ಪಿಟ್ಟು, ಪುರಿ-ಬೆಟಗೇರಿ ಚಟ್ನಿ, ಮಂಡಕ್ಕಿ ವಗ್ಗರಣೆ, ಅವಲಕ್ಕಿ ವಗ್ಗರಣೆ ಮಧ್ಯಾಹ್ನ ಹಾಗೂ ರಾತ್ರಿ ಪಲಾವ್‌, ಅನ್ನ ಸಂಬಾರ್‌, ಚಿತ್ರನ್ನಾವನಷ್ಟೇ ಉಣಬಡಿಸಲಾಗುತ್ತಿದೆ.

ಗುಣಮಟ್ಟ ಸರಿ, ಪ್ರಮಾಣ ಕಡಿಮೆ: ಬೆಟಗೇರಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಹಾಗೂ ಆಹಾರದ ರುಚಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಕ್ಯಾಂಟೀನ್‌ ನಿರ್ವಹಣೆ ಗುತ್ತಿಗೆ ಪಡೆದಿರುವ ಶೆಫ್‌ ಟಾಕ್‌ ಹಾಸ್ಪಿಟಾಲಿಟಿ ಸರ್ವೀಸಸ್‌ಗೆ ಸರಕಾರ ನೀಡಿರುವ ಆಹಾರ ಪಟ್ಟಿಗಿಂತ ಕಡಿಮೆ ಪ್ರಮಾಣದಲ್ಲಿ ಆಹಾರ ವಿತರಿಸಲಾಗುತ್ತಿದೆ.

ಬೆಳಗಿನ ಉಪಾಹಾರದಲ್ಲಿ ನಾಲ್ಕು ಪುರಿ, ಊಟಕ್ಕೆ ಅನ್ನ-ತರಕಾರಿ ಸಾಂಬರ್‌- ಮೊಸರನ್ನ ಅಥವಾ ಬಿಸಿಬೇಳೆ ಬಾತ್‌ ನೀಡಬೇಕು. ಇಲ್ಲವೇ ಎರಡು ರೊಟ್ಟಿ(ಬಿಸಿ, ಖಡಕ್‌) ಯೊಂದಿಗೆ ಅನ್ನ- ಸಂಬಾರ್‌, ಅನ್ನಸಾಂಬರ್‌-ಮೊಸರನ್ನ, ಅನ್ನ ಸಂಬಾರ್‌- ಪಲಾವ್‌, ಪಾಯಸ(ಹೆಸರು ಬೇಳೆ, ಕಡ್ಲೆ ಬೇಳೆ, ಗೋಧಿ  ಹುಗ್ಗಿ) ಮತ್ತು ಅನ್ನ ಸಾಂಬರ್‌ ನೀಡಬೇಕು. ಆದರೆ, ಕ್ಯಾಂಟೀನ್‌ನಲ್ಲಿ ಬೆಳಗ್ಗೆ ಒಂದು ಖಾದ್ಯ, ಊಟಕ್ಕೆ ಅನ್ನ ಸಾಂಬರ್‌ ನೀಡಲಾಗುತ್ತಿದ್ದು, ರೊಟ್ಟಿ, ಮೊಸರನ್ನ, ಬಿಸಿಬೇಳೆ ಬಾತ್‌ ಹಾಗೂ ಪಾಯಸದ ಬಗ್ಗೆ ಮಾತೇ ಇಲ್ಲ. ಉಪಾಹಾರಕ್ಕೆ ನೀಡಬೇಕಿದ್ದ ನಾಲ್ಕು ಪುರಿಗಳಲ್ಲಿ ಎರಡೇ ವಿತರಿಸಲಾಗುತ್ತಿದೆ.

ಇನ್ನು, ರಾಜ್ಯ ವಲಯಕ್ಕಿಂತ ಬೆಟಗೇರಿ ಮೆನು ಭಿನ್ನವಾಗಿದ್ದರೂ, ರಾಜ್ಯ ವಲಯದ ಆಹಾರ ಪಟ್ಟಿಯನ್ನೇ ಅಂಟಿಸಲಾಗಿದೆ. ಹೀಗಾಗಿ ಸ್ಥಳೀಯ ಕ್ಯಾಂಟೀನ್‌ನಲ್ಲಿ ಯಾವ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗುತ್ತದೆ ಎಂಬುದರ ಗೊತ್ತಾಗುವುದೇ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.

Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ, ರೊಟ್ಟಿ, ಚಪಾತಿ ನೀಡಬೇಕು. ಆದರೆ, ಅವುಗಳನ್ನು ತಯಾರಿಸುವ ಅಗತ್ಯವಾದ ಪಾತ್ರೆಗಳು ಈವರೆಗೂ ಪೂರೈಕೆಯಾಗಿಲ್ಲ. ಈ ಬಗ್ಗೆ ಕೇಳಿದರೆ ಅವೆಲ್ಲ ಬೆಂಗಳೂರಿನಿಂದ ಬರಬೇಕು ಎನ್ನುತ್ತಾರೆ. ಮಧ್ಯಾಹ್ನ 250-300 ಜನರು ಊಟ ಸೇವಿಸುತ್ತಾರೆ. ಉಪಹಾರ ಮತ್ತು ರಾತ್ರಿ ಊಟಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ. ದಿನದ ಮೂರೂ ಹೊತ್ತು ಸೇರಿಸಿದರೆ ಸುಮಾರು 500 ಜನರು ಆಗಬಹುದು.
 ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ

ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಉಪಾಹಾರ ಸಿಗುತ್ತದೆ. ಆದರೆ, ಬೆಳಗ್ಗೆ ನಾಲ್ಕು ಪುರಿ ಬದಲಾಗಿ ಕೇವಲ ಎರಡು ಪುರಿ ಮಾತ್ರ ನೀಡುತ್ತಿದ್ದಾರೆ. ಬೋರ್ಡ್‌ ಹಾಕಿರೋದು ಒಂದು, ಇಲ್ಲಿ ಕೊಡುವುದು ಒಂದು.
ಬಸವರಾಜ ಬನ್ನಿಗಿಡದ, 
ಸಾರ್ವಜನಿಕ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next