ಬೆಂಗಳೂರು: “ಅಣ್ಣಾ ನಿಂದೆಂಗಾಯ್ತು, ನೀನೊಬ್ಬ ಬರದಿದ್ರೆ ನನ್ ಲೀಡು ಇನ್ನೂ ದಾಟ್ತಿತ್ತು. ನಿನ್ಗೂ ಆಫರ್ ಬಂದಿತ್ತಾ…” “ಹೌದೂ..ನನ್ನೂ ಕರೆದಿದ್ರೂ ನಾ ಹೋಗ್ತಿನಾ….ಫಿಫ್ಟಿ ಆದ್ರೂ ಓಕೆ ಅಂದ್ರು..’ ವಿಧಾನಸಭೆ ಮೊಗಸಾಲೆಯಲ್ಲಿ ಶನಿವಾರ ಕೇಳಿ ಬಂದ ಮಾತುಗಳಿವು.
ಯಡಿಯೂರಪ್ಪ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಶಾಸಕರು ಪ್ರಮಾಣ ಸ್ವೀಕರಿಸಿ ಮೊಗಸಾಲೆಯಲ್ಲಿ ಎಲ್ಲ ಪಕ್ಷದವರೂ ಚರ್ಚೆಯಲ್ಲಿ ತೊಡಗಿದ್ದರು. ಈ ಮಧ್ಯೆ, ಕಾಂಗ್ರೆಸ್‌ನ ಬಿ.ಸಿ.ಪಾಟೀಲ್ ಅವರು, ತಮ್ಮನ್ನು ಬಿಜೆಪಿಗೆ ಸೆಳೆಯಲು ಖುದ್ದು ಯಡಿಯೂರಪ್ಪ, ಶ್ರೀರಾಮುಲು, ರಾಜ್ಯ ಉಸ್ತುವಾರಿ ಮರುಳೀಧರರಾವ್ ದೂರವಾಣಿ ಮೂಲಕ ಮಾತನಾಡಿದ್ದನ್ನು ಮಾಧ್ಯಮದವರಿಗೆ ಹೇಳಿದರು.
ಜೆಡಿಎಸ್‌ನ ಗುಬ್ಬಿ ಶ್ರೀನಿವಾಸ್ ಅವರನ್ನು ಕುರಿತು ಕಾಂಗ್ರೆಸ್‌ನ ಜಮೀರ್ ಅಹಮದ್, “ಏನ್ ಸೀನಣ್ಣಾ ನನ್ನ ಬೈಯ್ದಂತೆ’ ಅಂದ್ರು. ಅದಕ್ಕೆ ಶ್ರೀನಿವಾಸ್, “ಅಯ್ಯೋ ನಾನು ಬೈದಿಲ್ಲಣ್ಣ, ದೇವರಾಣೆ, ದೊಡ್ಡವರ ವಿಚಾರ ನಮಗ್ಯಾಗೆ ಅಂದೆ ಅಷ್ಟೆ ‘ ಅಂದರು. ಅದಕ್ಕೆ ಜಮೀರ್ ಅಹಮದ್, “ಆಯ್ತು ಬಿಡು ನಾನೇನು ಮನಸಲ್ಲಿ ಇಟ್ಟುಕೊಂಡಿಲ್ಲ’ ಅಂದರು.
ಅದೇ ಸಮಯಕ್ಕೆ ಬಂದ ಜೆಡಿಎಸ್‌ನ ನಾಗಮಂಗಲ ಸುರೇಶ್‌ಗೌಡ, ಮಾಗಡಿ ಮಂಜು, ಮಳವಳ್ಳಿ ಡಾ.ಕೆ.ಅನ್ನದಾನಿ, “ನೀನು ನಮ್ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದಿಲ್ಲಾಂದ್ರೆ ನಮ್ ಲೀಡು ಇನ್ನೂ 15-20 ಸಾವಿರ ಜಾಸ್ತಿ ಆಗ್ತಿತ್ತು’ ಎಂದು ವರಾತ ತೆಗೆದರು. ಆಗ ಜಮೀರ್ ಅಹಮದ್, “ಪಕ್ಷದ ಕೆಲ್ಸ ಅಣ್ಣಾ ; ಎಂದು ನಕ್ಕು ಸುಮ್ಮನಾದರು.
81 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಅವರ ಕುರಿತು ಬಿಜೆಪಿಯ ಶಾಸಕರು ಏನಪ್ಪ ನಿಂದು ಲೀಡು ಅಂತ ಹುಬ್ಬೇರಿಸಿದರು. ನಮೆನಿಲ್ಲ ಸಾರ್…ಎಲ್ಲ ನಂ ಸಾಹೇಬ್ರುದು ಅಂತ ಜಮೀರ್ ಅಹಮದ್ ಅವರತ್ತ ಕೈ ತೋರಿಸಿದರು.
ಬಿಜೆಪಿಯ ಉಮೇಶ್ ಕತ್ತಿ ಅವರ ಕುರಿತು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, “ಹಿರಿಯ ಶಾಸಕ 7 ಬಾರಿ ಗೆದ್ದಿರುವ ಕತ್ತಿ ಆವರಿಗೆ ನಮಸ್ಕಾರ’ ಅಂದರು. ಅದಕ್ಕೆ ಪ್ರತಿಯಾಗಿ ಕತ್ತಿ ಅವರು “ನಮಸ್ಕಾರ ಸಾರ್, ಏಳು ಬಾರಿಯಲ್ಲ 8 ಬಾರಿ’ ಅಂತ ಹೇಳಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಪರಸ್ಪರ ಏನಪ್ಪಾ, ಲೆಕ್ಕಾಚಾರ ವರ್ಕ್‌ಔಟ್ ಆಯ್ತಾ ಎಂದು ಪ್ರಶ್ನಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.