ಮುಂಬಯಿ: ಲೋಕಾಯುಕ್ತ ಮತ್ತು ಲೋಕಾಯುಕ್ತ ಕಾಯಿದೆ 2013 ಪ್ರಕಾರ ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್‌ಮನ್ ಮತ್ತು ಲೋಕಾಪಾಲ ನೇಮಕಕ್ಕೆ ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜನವರಿ 30 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಮಹಾರಾಷ್ಟ್ರದ ರಾಲೆಗಣ್ ಸಿದ್ಧಿಯಲ್ಲಿ ಎಎನ್‌ಐನೊಂದಿಗೆ ಮಾತನಾಡಿದ ಹಜಾರೆ ಅವರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸುವುದಾಗಿ ಗುಡುಗಿದ್ದಾರೆ.
2013 ರಲ್ಲಿ ಲೋಕಾಯುಕ್ತ ಮತ್ತು ಲೋಕ್‌ಪಾಲ್ ಕಾಯಿದೆಯನ್ನು ಮಾಡಲಾಗಿತ್ತು. ಆ ಬಳಿಕ 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಅವರು 5 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಹೀಗಾಗಿ ನಾನು ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಈ ಹಿಂದೆ ಪ್ರಧಾನಿ ಅವರಿಗೆ ಪತ್ರಗಳನ್ನು ಬರೆದಿದ್ದೆ. ಆದರೆ ಪ್ರಧಾನಿ ಲೋಕ್‌ಪಾಲ್ ಕುರಿತಾಗಿನ ಯಾವುದೇ ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಎಂದು ಹಜಾರೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಲೋಕಪಾಲ ನೇಮಕ ಕುರಿತಾಗಿನ ಸಮಿತಿ ಸಭೆ ಜನವರಿ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಮಿತಿಯಲ್ಲಿ ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುರ ಖರ್ಗೆ ಅವರೂ ಇದ್ದಾರೆ.